ಕಾರವಾರ: ಕುಚಲಕ್ಕಿ ಭತ್ತ ಬೆಳೆಯುವ ರೈತರು ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಕುಚಲಕ್ಕಿ ಭತ್ತ ಖರೀದಿ ಕೇಂದ್ರಗಳಿಗೆ ಭತ್ತವನ್ನು ಪೂರೈಸದೆ ನೇರವಾಗಿ ಮಾರಾಟ ಮಾಡುತ್ತಿದ್ದು, ಆಗಿರುವ ತಾಂತ್ರಿಕ ಸಮಸ್ಯೆಯನ್ನು ಅಧಿಕಾರಿಗಳು ಸರಿಪಡಿಸಿ ಖರೀದಿ ಕೇಂದ್ರಗಳಿಗೆ ಭತ್ತ ಪೂರೈಕೆ ಆಗುವಂತೆ ಕ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾ0ಗಣದಲ್ಲಿ ಡಿಸೆಂಬರ್ 5 ರಂದು ಹಮ್ಮಿಕೊಂಡಿದ್ದ ಕನಿಷ್ಠ ಬೆಂಬಲಬೆಲೆ ಯೋಜನೆ 2022-23 ರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ರೈತರಿಂದ ಸ್ಥಳೀಯವಾಗಿ ಬೆಳೆಯಲಾಗುವ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತು JAMJ ತಳಿಗಳ ಉತ್ತಮ ಗುಣಮಟ್ಟದ ಕುಚಲಕ್ಕಿ ಭತ್ತ ಎಷ್ಟು ಹೆಕ್ಟ್ಟೆರ್ ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.
ಜಿಲ್ಲೆಯಲ್ಲಿ 45000 ಹ್ಯಾಕ್ಟರ್ ಪ್ರದೇಶದಲ್ಲಿ ಬತ್ತ ಬೆಳೆಯುತ್ತಿದ್ದು, 14500 ಹ್ಯಾಕ್ಟರ್ ಪ್ರದೇಶದಲ್ಲಿ ಕುಚಲಕ್ಕಿ ಬೆಳೆಯಲಾಗಿದೆ ಹಾಗೂ ಅದರಲ್ಲಿ 5 ಲಕ್ಷ 20 ಸಾವಿರ ಕ್ವಿಂಟಲ್ ಬತ್ತವನ್ನು ಬೆಳೆಯಲಾಗುತ್ತದೆ ಮತ್ತು ಇವುಗಳಿಗೆಲ್ಲ ಖರೀದಿಕೇಂದ್ರ ಸ್ಥಾಪನೆ ಯಾಗಿರುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇಡೀ ಧಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಒಟ್ಟು 1 ಲಕ್ಷ ಕ್ವಿಂಟಲ ಅಕ್ಕಿ ಬೇಕಾಗಿದ್ದು ಹಾಗೂ ಜಿಲ್ಲೆಗೆ 17 ರಿಂದ 18 ಲಕ್ಷ ಕ್ವಿಂಟಲ ಬತ್ತ ಬೇಕು. ಅಷ್ಟು ಪೂರೈಸಲು ಆಗದಿದ್ದರೂ ಕನಿಷ್ಠ 6 ಲಕ್ಷ ಕ್ವಿಂಟಲ್ ಭತ್ತ ಪೂರೈಕೆಗೆ ಕ್ರಮ ಕೈಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರ ಸರ್ಕಾರ ಈಗಾಗಲೇ ರೂ.2040 ಬೆಂಬಲ ಬೆಲೆ ನೀಡುತ್ತಿದ್ದು, ರಾಜ್ಯ ಸರ್ಕಾರ ರೂ.500 ಬೆಂಬಲ ಬೆಲೆ ನೀಡುತ್ತಿದೆ. ಇಷ್ಟು ಮೊತ್ತದ ಬೆಂಬಲ ಬೆಲೆ ಕೊಟ್ಟಾಗಲು ಕೂಡ ರೈತರಿಂದ ಬತ್ತ ಖರೀದಿ ಸಾಧ್ಯವಾಗುತ್ತಿಲ್ಲದಿರುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಹಳಿಯಾಳ ಮತ್ತು ಮುಂಡಗೋಡದಲ್ಲಿ ಬತ್ತವನ್ನು ಬೆಳೆಯಲಾಗುತ್ತದೆ. ಈ ಭಾಗದ ರೈತರು ಖರೀದಿ ಕೇಂದ್ರಗಳಿಗೆ ಬತ್ತ ಪೂರೈಸುತ್ತಿಲ್ಲ ನೇರವಾಗಿ ತಮ್ಮ ಜಮೀನುಗಳಿಂದಲ್ಲೇ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಿ ರೈತರಿಗೆ ಆಗಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಿ ಖರೀದಿ ಕೇಂದ್ರ ಕ್ಕೆ ಬತ್ತ ಪೂರೈಸುವಂತೆ ಮತ್ತು ರೈತರಿಗೆ ಅನುಕೂಲಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕಿ ರೂಪಲಿ ನಾಯ್ಕ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ್, ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಉಪಾಧ್ಯಕ್ಷರು ಕಿರಣ ಕೊಡಗಿ, ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಆಹಾರ ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.