ಕಾರವಾರ: ಮರಾಠ ಸಮುದಾಯ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು, 2ಎ ಮೀಸಲಾತಿ ನೀಡಬೇಕು.ಜೊತೆಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಮರಾಠ ಮುಖಂಡ ಎಲ್.ಟಿ.ಪಾಟೀಲ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 50 ಲಕ್ಷ ಮರಾಠ ಸಮುದಾಯದ ಜನಸಂಖ್ಯೆ ಇದೆ. ಆದರೆ ನಾವು ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದೇವೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರಕಾರ ಇದ್ದಾಗ 2 ಎ ಮೀಸಲಾತಿ ನೀಡುವ ಬಗ್ಗೆ ಆಶ್ವಾಸನೆ ನೀಡಿದ್ದರು. ಈಗ ಬೊಮ್ಮಾಯಿ ಅವರೂ ಕೂಡಾ ಅದನ್ನೇ ಮುಂದುವರೆಸಿದ್ದಾರೆ. ಇನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರು ಕೇಂದ್ರದ ನಿಯೋಗಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ ಎಂದಿದ್ದಾರೆ. ಆದರೆ ಯಾವುದೂ ಪ್ರಯೋಜನವಾಗಲಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ವಿಧಾನಸೌಧದ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿಯಾದ 24 ಗಂಟೆಯಲ್ಲಿ ಮರಾಠ ಸಮಾಜವನ್ನು 2 ಎ ಗುಂಪಿಗೆ ಸೇರಿಸುವ ಮಾತು ಕೊಟ್ಟಿದ್ದರು. ಆದರೆ ಮಾತು ಉಳಿಸಿಕೊಳ್ಳಲಿಲ್ಲ. ಬೊಮ್ಮಾಯಿ ಅವರು ನಮ್ಮ ಸಮಾಜದತ್ತ ತಿರುಗಿ ನೋಡಿಲ್ಲ. ಮರಾಠ ಸಮಾಜವನ್ನು ಮರಳಿ ಒಗ್ಗೂಡಿಸೋಣ. ಅದಕ್ಕಾಗಿ ನಾನು ರಾಜ್ಯ ಸುತ್ತಲು ಸಿದ್ಧ. ನಮ್ಮನ್ನು ಇತ್ತ ಬಿಜೆಪಿಗರು ನಂಬುತ್ತಿಲ್ಲ. ನಮ್ಮನ್ನು ಕಾಂಗ್ರೆಸ್ ನವರು ಎಂದು ಬಿಂಬಿಸಲಾಗಿದೆ. ಕಾಂಗ್ರೆಸ್‌ನವರು ನಮ್ಮನ್ನು ಬಿಜೆಪಿಯವರಂತೆ ಕಾಣುತ್ತಾರೆ. ಇದು ನಮ್ಮ ಸಂಕಟ. ನಮಗೆ ನಾವೇ ಈಗ ನಾಯಕರಾಗಬೇಕಿದೆ. ಘೋರ್ಪಡೆ ಕಾಲಕ್ಕೆ ಸಮಾಜ ಒಗ್ಗೂಡಲಿಲ್ಲ. ಪಿ.ಜಿ.ಆರ್.ಸಿಂಧ್ಯಾ ಅವರ ಪ್ರಯತ್ನವೂ ಸಾಕಾಗಲಿಲ್ಲ. ಈಗ ನಾವು ಮತ್ತೆ ಪ್ರಯತ್ನಿಸೋಣ ಎಂದರು.
ಇನ್ನು ರಾಜಕೀಯವಾಗಿ ನಮ್ಮ ಸಮುದಾಯದವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಿದ್ದೇವೆ. ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದೊಂದಿಗೂ ಮಾತನಾಡಿದ್ದೇವೆ. ಹೀಗಾಗಿ ನಮಗೆ ಟಿಕೆಟ್ ನೀಡಬೇಕು. ಯಾವುದೇ ಪಕ್ಷದಿಂದ ಟಿಕೆಟ್ ಸಿಕ್ಕರೂ ನಮ್ಮ ಸಮುದಾಯದವರು ಬೆಂಬಲಿಸಿತ್ತಾರೆ. ಜಿಲ್ಲೆಯ ಯಲ್ಲಾಪುರ ಹಾಗೂ ಹಳಿಯಾಳ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ದಿಸುವ ಬಗ್ಗೆ ಸಮುದಾಯದ ನಾಯಕರು ಚರ್ಚೆ ನಡೆಸಿದ್ದಾರೆ. ಮರಾಠ ಸಮುದಾಯಕ್ಕೆ ರಾಜಕೀಯವಾಗಿ 15 ಶಾಸಕರನ್ನು ಗೆಲ್ಲಿಸುವಷ್ಟು ಜನಬಲವಿದೆ. 2 ಎ ಮೀಸಲಾತಿಯ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಮತ್ತೊಬ್ಬರ ಸೋಲಿಗಾದರೂ ಕಾರಣವಾಗುತ್ತೇವೆ ಎಂದರು.
ಜಿಲ್ಲಾ ಮರಾಠ ಪರಿಷತ್ ಮಾಜಿ ಸದಸ್ಯ ಎಸ್.ಕೆ.ಗೌಡ, ಮಾಜಿ ಜಿಲ್ಲಾಧ್ಯಕ್ಷ ಉಡುಚಪ್ಪ ಬೋಬಾಟಿ, ನಾಗರಾಜ ಬೆಣ್ಣಿ, ಸುಭಾಷ್ ಕಳಸೂರಕಾರ, ಶಾಮಲಾ ಕುರಿಯವರ, ಸತೀಶ ಆಚಾರಿ, ಜ್ಯೋತಿ ಡೋರಿ, ಕವಿತಾ, ಸುಧಾ ಲೆಲ್ಲಿಕೊಪ್ಪ ಇದ್ದರು.