ಶಿರಸಿ: ಶಿರಸಿ ಅರ್ಬನ್ ಬ್ಯಾಂಕ್ ವತಿಯಿಂದ ‘ಡಾ. ವಿ.ಎಸ್. ಸೋಂದೆ ಸ್ಮರಣಾರ್ಥ’ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಅಂಬೇಡ್ಕರ್ ಭವನದಲ್ಲಿ ಡಿ.11 ರಂದು ಹಮ್ಮಿಕೊಳ್ಳಲಾಗಿದೆ ಎಂದು ಅರ್ಬನ್ ಬ್ಯಾಂಕ್ನ ಅಧ್ಯಕ್ಷ ಜಯದೇವ ಯು. ನೀಲೇಕಣಿ ತಿಳಿಸಿದರು.
ನಗರದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾ ಮಂಡಳದ ಅಧ್ಯಕ್ಷ ಎಚ್.ಕೆ ಪಾಟೀಲ್, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಸಹಕಾರ ಸಂಘದ ನಿಬಂಧಕ ಡಾ. ಕೆ. ರಾಜೇಂದ್ರ (IAS) ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರದ ಹೆಸರಾಂತ ಬ್ಯಾಂಕಿಂಗ್ ತಜ್ಞರಾದ ರಿಸರ್ವ್ ಬ್ಯಾಂಕ್ ಸೆಂಟ್ರಲ್ ಬೋರ್ಡ್ ಸಂಸ್ಥಾಪನಾ ನಿರ್ದೇಶಕ ಸತೀಶ ಕೆ. ಮಾರಾಠ, “ಅರ್ಬನ್ ಕೋ-ಆಪರೇಟಿವ್ ಬ್ಯಾಂಕುಗಳು ಸಾಗಬೇಕಾದ ಮುಂದಿನ ದಾರಿ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯದ 250ಕ್ಕೂ ಹೆಚ್ಚು ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳು, ಸ್ಥಳೀಯ ಆರ್ಥಿಕ ಸಂಸ್ಥೆ, ಸಹಕಾರ ಸಂಘಗಳ 400 ರಿಂದ 600 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮಿಲಿಂದ ವಿ. ಪಂಡಿತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಎಸ್. ಶೆಟ್ಟರ್, ಚಂದ್ರಿಕಾ ಹಳದೀಪುರಕರ್ ಇದ್ದರು.