ಭಟ್ಕಳ: ಮಂಗಳೂರಿನ ಶ್ರೀನಿವಾಸ ಆಸ್ಪತ್ರೆ, ಮುರುಡೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ಮುರುಡೇಶ್ವರ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಮುರುಡೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು.
ಕ್ರೀಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ ನಾಯ್ಕ ಶಿಬಿರ ಉದ್ಘಾಟಿಸಿ ಮಾತನಾಡಿ, ಈಗಿನ ಕಾಲಘಟ್ಟದಲ್ಲಿ ಮನುಷ್ಯ ತಮ್ಮ ಒತ್ತಡ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಮಾನಸಿಕ ಒತ್ತಡ ಸೇರಿದಂತೆ ಹಲವಾರು ಕಾಯಿಲೆಗಳನ್ನು ಹೊಂದಿರುತ್ತಾರೆ. ಕಾಲ ಕಾಲಕ್ಕೆ ತಪಾಸಣೆ ಹಾಗೂ ವೈದ್ಯರ ಚಿಕಿತ್ಸೆಯಿಂದ ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೆ ಪತ್ತೆಹಚ್ಚಿ ಗುಣಪಡಿಬಹುದು ಎಂದರು.
ಮುರುಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ವಿ.ಹೆಗಡೆ ಮಾತನಾಡಿ, ಲಯನ್ಸ್ ಕ್ಲಬ್ ರ್ಸಾಜನಿಕರ ಸೇವೆಗಾಗಿಯೇ ಹಲವಾರು ಕಾರ್ಯಕ್ರಮಗಳಣ್ನು ಏರ್ಪಡಿಸುತ್ತಿದೆ. ಯಾರಿಗೆ ಅಗತ್ಯತೆ ಇರುತ್ತದೆಯೋ ಅಲ್ಲಿ ಸೇವೆ ಮಾಡುವ ಕೆಲಸ ಕ್ಲಬ್ ವತಿಯಿಂದ ನಡೆಯುತ್ತಿದೆ. ಮನುಷ್ಯನಿಗೆ ಆರೋಗ್ಯವೇ ಮುಖ್ಯ, ಅದನ್ನು ನಾವು ಕಾಪಾಡಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಶ್ರೀನಿವಾಸ ಆಸ್ಪತ್ರೆಯ ವೈದ್ಯ ಡಾ.ಕಾರ್ತಿಕ್, ಮುರುಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಪ್ರಿಯಾ ಗೋನ್ಸಾಲಿಸ್ ಇದ್ದರು. ಪ್ರಾರಂಭದಲ್ಲಿ ಪವನಕುಮಾರ ಪ್ರಾರ್ಥನೆ ಹಾಡಿದರು. ಕ್ರಿಯಾಶೀಲ ಗೆಳೆಯರ ಸಂಘದ ಕಾರ್ಯದರ್ಶಿ ಪಾಂಡುರಂಗ ನಾಯ್ಕ ಸ್ವಾಗತಿಸಿದರು. ಡಾ.ಸುನೀಲ್ ಜತ್ತಣ್ಣ ವಂದನಾರ್ಪಣೆ ಮಾಡಿದರು. ಲಯನ್ಸ್ ಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 400ಕ್ಕೂ ಅಧಿಕ ರೋಗಿಗಳಿಗೆ ತಪಾಸಣೆ ನಡೆಸಲಾಯಿತು.