ಭಟ್ಕಳ: ಉಜಿರೆ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳೇ ನಾಮಧಾರಿ ಸಮಾಜದ ಕುಲಗುರುಗಳಾಗಿದ್ದು, ಸಮಾಜದವರಲ್ಲಿ ಯಾವುದೇ ರೀತಿಯ ಗೊಂದಲ ಬೇಡ ಎಂದು ಗುರುಮಠ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಾ ನಾಯ್ಕ ಹೇಳಿದ್ದಾರೆ.
ಇತ್ತೀಚಿಗೆ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಮೇಲುಕೋಟೆಯ ಯತಿರಾಜ್ ಜೀಯರ್ ಅವರಲ್ಲಿ ನಾಮಧಾರಿ ಕುಲಗುರುಗಳಾರು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲದ ಚರ್ಚೆಗಳು ಎದ್ದಿದ್ದವು. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಸರ್ಪನಕಟ್ಟೆಯ ಶ್ರೀವಾಸುಕಿ ಸರ್ಪ ದೇವಸ್ಥಾನದಲ್ಲಿ ಡಿ.18ರಂದು ನಡೆಸುವ ಗುರುವಂದನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನಮ್ಮ ನಾಮಧಾರಿ ಸಮಾಜದ ಹೆಸರು ಮತ್ತು ನಿಚ್ಚಲಮಕ್ಕಿ ಶ್ರೀತಿರುಮಲ ವೆಂಕಟರಮಣ ದೇವಸ್ಥಾನದ ಹೆಸರು ಬಳಸಿರುವುದು ಅಕ್ಷಮ್ಯ ಅಪರಾಧ. ಹಾಗಾಗಿ ಅವರು ನಡೆಸುವ ಗುರುವಂದನಾ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ದೇವಸ್ಥಾನದ ಆಡಳಿತ ಮಂಡಳಿ ಪರವಾಗಿ ಯಾವುದೇ ಕಾರ್ಯಕ್ರಮ ಇಲ್ಲ. ಈ ಕಾರ್ಯಕ್ರಮದಲ್ಲಿ ಮಂಡಳಿಯ ಯಾರೊಬ್ಬರೂ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗುರುಮಠದ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಕಾರ್ಯದರ್ಶಿ ಮಾಸ್ತಿ ನಾಯ್ಕ, ಶ್ರೀರಾಮ ಕ್ಷೆತ್ರದ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ಆಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಜರಿದ್ದರು.