ಭಟ್ಕಳ: ಶುದ್ಧ ಕುಡಿಯುವ ನೀರು ನಮ್ಮೆಲ್ಲರ ಹಕ್ಕು. ನೀರೊಂದು ಅಮೂಲ್ಯವಾದ ಸಂಪತ್ತು. ಅದರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಶಿರಸಿಯ ನೀರಿನ ರಸಾಯನ ತಜ್ಞೆ ಅಶ್ವಿನಿ ನಾಯ್ಕ ಹೇಳಿದರು.
ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ‘ಅವನಿ’ ರೇಂಜರ್ಸ್ ಘಟಕದವರು ‘ಮನೆ ಮನೆಗೂ ಗಂಗೆ’ ನೀರಿನ ಗುಣಮಟ್ಟ ಪರೀಕ್ಷೆಯ ಪರಿವೀಕ್ಷಣೆ ಮತ್ತು ಕಲುಷಿತ ನೀರಿನಿಂದಾಗುವ ಆರೋಗ್ಯ ಹಾನಿಗಳ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡುತ್ತಾ, ಕುಡಿಯುವ ನೀರಿನ ಗುಣಮಟ್ಟವನ್ನು ಅರಿಯುವ ನೀರಿನ ಭೌತಿಕ ಪರೀಕ್ಷಾ ವಿಧಾನಗಳಾದ ಬಣ್ಣ, ವಾಸನೆ, ರುಚಿ ಮತ್ತು ನೀರಿನ ರಾಸಾಯನಿಕ ಪರೀಕ್ಷಾ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸುತ್ತಾ ತಮ್ಮ ಮನೆಯ ಕುಡಿಯುವ ನೀರಿನ ಗುಣಮಟ್ಟವನ್ನು ತಿಳಿಯುವಂತೆ ಕರೆ ನೀಡಿದರು.
ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ ಅಧ್ಯಕ್ಷತೆ ವಹಿಸಿದ್ದರು. ಕುಡಿಯುವ ನೀರಿನ ಸಂರಕ್ಷಣೆಯ ಬಗ್ಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಕಾರ್ಯಾಗಾರದ ಮೂಲಕ ಜಾಗೃತಿ ಮೂಡಿಸುತ್ತಿರುವ ಅಶ್ವಿನಿ ನಾಯ್ಕ ಅವರನ್ನು ಅವನಿ ರೇಂಜರ್ಸ್ ಘಟಕದ ಪರವಾಗಿ ಸನ್ಮಾನಿಸಲಾಯಿತು. ‘ಅವನಿ’ ರೇಂಜರ್ಸ್ ಘಟಕದ ದಳನಾಯಕಿ ಹೇಮಾ ನಾಯ್ಕ ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ನೇಹಾ ಕೊಪ್ಪಿಕರ ವಂದಿಸಿದರು. ಸ್ನೇಹಾ ರೇವಣಕರ್ ನಿರ್ವಹಿಸಿದರು.