ಅಂಕೋಲಾ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ಹೆಗ್ಗಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ದಮಯಂತಿ ಗಾಂವಕರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಘದ ಈ ಕಾರ್ಯ ಸರ್ವತ್ರ ಶ್ಲಾಘನೀಯವಾಗಿದೆ. ಸಂಘದ ಸನ್ಮಾನ ವೃತ್ತಿ ಸಾರ್ಥಕತೆಯನ್ನು ಇಮ್ಮಡಿಗೊಳಿಸಿದೆ. ತಾಲೂಕು ಕೇಂದ್ರದಿ0ದ 60 ಕಿಲೋ ಮೀಟರ್ ದೂರದಲ್ಲಿರುವ ನಮ್ಮ ಶಾಲೆಗೆ ಬಂದು ವಯೋ ನಿವೃತ್ತಿ ಹೊಂದುತ್ತಿರುವ ನನ್ನನ್ನು ಗೌರವಿಸಿರುವುದು ಸಂತಸವನ್ನು ತಂದಿದೆ ಎಂದರು.
ಸನ್ಮಾನಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರಿ, ಹಲವಾರು ದಶಕಗಳ ಕಾಲ ಶಿಕ್ಷಕರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿ, ನೂರಾರು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡಿ ವಯೋ ನಿವೃತ್ತಿಯನ್ನು ಹೊಂದುತ್ತಿರುವ ಈ ಸಂದರ್ಭದಲ್ಲಿ ವಯೋನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಸಂಘ ಸಾರ್ಥಕತೆಯನ್ನು ಪಡೆದುಕೊಂಡಿದೆ ಎಂದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಭಾಗ್ವತ ಸಾಂದರ್ಭಿಕವಾಗಿ ಮಾತನಾಡಿ, ಶುಭಾಶಯ ಕೋರಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್.ನಾಯಕ ಬೇಲೇಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷೆ ಭಾರತಿ ಬಿ.ನಾಯಕ, ಶೋಭಾ ಎಸ್.ನಾಯಕ ಅಭಿನಂದಿಸಿ ಮಾತನಾಡಿದರು. ಶಿಕ್ಷಕ ಗಣೇಶ ಭಟ್ ಸ್ವಾಗತಿಸಿ, ನಿರ್ವಹಿಸಿದರು. ಶಿಕ್ಷಕಿ ಸುರೇಖಾ ಹಾರ್ವಾಡೇಕರ ವಂದಿಸಿದರು. ಶಿಕ್ಷಕಿ ಆಶಾ ನಾಯ್ಕ ಸಹಕರಿಸಿದರು.