ಶಿರಸಿ: ತಾಲೂಕಿನ ಮಂಜಗುಣಿಯ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಡಿ.3 ಮತ್ತು ಡಿ.11ರಂದು ‘ಭೂದಾನ ಅಭಿಯಾನ ಶ್ರೀಹರಿ ಪಾದಾರ್ಪಣೆ’ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಹೇಳಿದರು.
ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇವಸ್ಥಾನಕ್ಕೆ ಅತಿ ಅವಶ್ಯಕ ಇರುವ ಜಮೀನು ಹುಡುಕುವಾಗ ದೇವರು ತೋರಿದಂತೆ ಹತ್ತು ಎಕರೆ ಜಮೀನು ಖರೀದಿಸಲಾಗಿದೆ. ಆ ಭೂಮಿ ಖರೀದಿಗೆ ಇದ್ದ ಅಡೆತಡೆಗಳನ್ನು ದೇವರ ಪರಿಹಾರದಿಂದ ಬಗೆಹರಿಸಿ, ಭಕ್ತಕೋಟಿಯಲ್ಲಿ ವಿನಂತಿಸಿ ಜಮಾ ಆದ ಕೋಟಿ ಹಣದಲ್ಲಿ ಭೂಮಿ ಖರೀದಿಯಾಗಿದೆ. ಅದನ್ನು ಧಾರ್ಮಿಕ ಕಾರ್ಯಕ್ರಮದ ಮೂಲಕ ಒಪ್ಪಿಸಿಕೊಳ್ಳಲಾಗುವುದು ಎಂದರು.
ಡಿ.3ಕ್ಕೆ ಭೂವರಾಹ ಮಂತ್ರ ಹವನ, ಪ್ರಧಾನ ಸಂಕಲ್ಪ, ಭೂಪರಿಗ್ರಹ, ಭೂಪೂಜಾ ಹಾಗೂ ದಾನ ಪ್ರಕ್ರಿಯೆ ನಡೆಯಲಿದೆ. ಡಿ.11ಕ್ಕೆ ದಧಿವಾಮನ ಮಂತ್ರ ಹವನ, ಸರ್ವಸಮರ್ಪಣೆ, ಭೂಪೂಜಾ ಹಾಗೂ ದಾನ ಪ್ರಕ್ರಿಯೆ ನಡೆಯಲಿದೆ. ಅದೇ ರೀತಿ ಡಿ.3ರಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಹಾಬಲೇಶ್ವರ ಜೋಶಿ ಕಾನಮೂಲೆ ಅವರ ಉಪಸ್ಥಿತಿ ಇರಲಿದೆ. ಭಾಲಚಂದ್ರ ಶ್ರೀಪಾದರಾವ್ ಖರೆ ಮಂಜಗುಣಿ, ಶಂಭು ಹೆಗಡೆ ಕಿರುಗಾರ, ಕಮಲಾಕರ ಶೇಟ್ ಮಂಜಗುಣಿ, ವೆಂಕಟರಮಣ ಭಂಡಾರಿ ಮಂಜಗುಣಿ ಇವರಿಗೆ ಸಮ್ಮಾನ ನೆರವೇರಲಿದೆ ಎಂದು ತಿಳಿಸಿದರು.
ಡಿ.11ರಂದು ಮಧ್ಯಾಹ್ನ 3.30 ರಿಂದ 5.30ರವರೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಜಯನಗರ ಅರಸು ವಂಶಸ್ಥ ಕೃಷ್ಣದೇವರಾಯ ಆನೆಗುಂದಿ ಹಾಗೂ ಇತಿಹಾಸಕಾರ ಡಾ.ಲಕ್ಷ್ಮೀಶ ಹೆಗಡೆ ಸೋಂದಾ ಭಾಗವಹಿಸಲಿದ್ದಾರೆ. ಅಂದು ಗಣಪತಿ ಹೆಗಡೆ ಕಾಗೇರಿ, ಮಂಜುನಾಥ ಶೆಟ್ಟಿ, ಅರ್ಬನ್ ಕೋ- ಆಪ್ ಬ್ಯಾಂಕಿನ ಪ್ರತಿನಿಧಿಗಳಿಗೆ ಸಮ್ಮಾನ ನೆರವೇರಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀರಾಮ ಹೆಗಡೆ, ಅನಂತ ರಾಮಕೃಷ್ಣ ಪೈ, ಮಹಾಬಲೇಶ್ವರ ಹೆಗಡೆ ಇದ್ದರು.