ಯಲ್ಲಾಪುರ: ತಾಲೂಕಿನ ರಾಷ್ರ‍್ಟೀಯ ಹೆದ್ದಾರಿ ಅರಬೈಲ್ ಬಳಿ ಮಧ್ಯರಾತ್ರಿಯಲ್ಲಿ ದರೋಡೆ ಮಾಡಿ ನಾಪತ್ತೆಯಾಗಿದ್ದ ಮೂವರು ಅಂತರರಾಜ್ಯ ದರೋಡೆಕೋರರನ್ನು ಪೊಲೀಸರು ಬಂಧಿಸಿ, ಕಾರು, ಹಣ, ಮೊಬೈಲ್ ಸೇರಿದಂತೆ ನಗದನ್ನು ಜಪ್ತಿಪಡಿಸಿಕೊಂಡಿದ್ದಾರೆ.
ಅ.2 ರಂದು ರಾತ್ರಿ 1.30ರ ಸುಮಾರಿಗೆ ಕಾರವಾರ- ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಅರಬೈಲ್ ಬಳಿ 7- 8 ಮಂದಿ ಚಿನ್ನದ ವ್ಯಾಪಾರಸ್ಥರ ಕಾರನ್ನು ಅಡ್ಡಗಟ್ಟಿ, ಅವರನ್ನು ಬೆದರಿಸಿ ವ್ಯಕ್ತಿಯ ಕಾರು, 2,11,86,000 ರೂ. ಹಣ ಮತ್ತು 10 ಸಾವಿರ ರೂ. ಬೆಲೆಬಾಳುವ ಮೊಬೈಲ್ ಅನ್ನು ದರೋಡೆ ಮಾಡಿದ್ದರು. ಈ ಕುರಿತು ಅ.4ರಂದು ಕೊಲ್ಲಾಪುರದ ಗಡಗ್ಲಾಂಜ್ ಕಾಳಬೈರಿ ರೋಡಿನ ನಿವಾಸಿ ನಿಲೇಶ ನಾಯ್ಕ ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ದರೋಡೆಕೋರರ ಮಾಹಿತಿ ಕಲೆ ಹಾಕಿ, ಆರೋಪಿಗಳಾದ ಕೇರಳದ ಕಾಸರಗೋಡ ಕುಂಬಳದ ಶಿರಿಯಾ ಪುತಿಯಂಗಡಿಯ ಮಹಮದ್ ಕಬೀರ್ ಮೈನುದ್ದಿನ್ ಹಾಜಿ, ಪಾಲಕ್ಕಾಡ್ ನಾನ್‌ಮಾರ್‌ನ ಆಯಲೂರ್ ಕೋಜಿಕೋಡಿಯ ಸುಭಾಷ್ ರಾಧಾಕೃಷ್ಣನ್, ಪಾಲಕ್ಕಾಡ್‌ನ ನೆಮ್ಮಾರ್ ಐಲೂರ್ ಕಯ್ಯಪ್ಪನಚೆರಿಯ ಅಪ್ಪು ವಿಜಯಕೃಷ್ಣನ್‌ನ್ನು ಬಂಧಿಸಿದ್ದಾರೆ.
ಅವರ ಬಳಿ ಇದ್ದ ಮಹಿಂದ್ರಾ ಮೊರೆಜೊ, ಮಾರುತಿ ಬ್ರೀಜಾ ಮತ್ತು ದರೋಡೆ ಮಾಡಿಕೊಂಡು ಹೋದ ಸ್ವಿಫ್ಟ್ ಕಾರು ಹಾಗೂ ನಗದು 98,000 ಸೇರಿ ಒಟ್ಟು 19,98,000 ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸುಮಾರು 20ಕ್ಕೂ ಹೆಚ್ಚು ಅಂತರರಾಜ್ಯ ದರೋಡೆಕೊರರು ಭಾಗಿಯಾಗಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈ ತಂಡದ ಹಿಂದೆ ಪ್ರಭಾವಿ ದರೋಡೆಕೋರರ ಬಳಗ ಇರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಮತ್ತು ಶಿರಸಿ ಡಿವೈಎಸ್‌ಪಿ ರವಿ ನಾಯ್ಕ ನಿರ್ದೇಶನದಲ್ಲಿ, ಯಲ್ಲಾಪುರ ಪಿಐ ಸುರೇಶ ಯಳ್ಳೂರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಪಿಎಸ್‌ಐಗಳಾದ ಮಂಜುನಾಥ ಗೌಡರ್, ಅಮೀನ್ ಸಾಬ್ ಅತ್ತಾರ, ಉದಯ್ ಮತ್ತು ಸಿಬ್ಬಂದಿ ಬಸವರಾಜ ಹಗರಿ, ಮಹಮದ್ ಶಫಿ, ದೀಪಕ ನಾಯ್ಕ, ಗಜಾನನ ನಾಯ್ಕ, ಡ್ಯಾನಿ ಫರ್ನಾಂಡಿಸ್, ರಾಜೇಶ ನಾಯಕ, ಪರಶುರಾಮ ಕಾಳೆ, ಪ್ರವೀಣ ಪೂಜಾರ್, ಚನ್ನಕೇಶವ, ಗಿರೀಶ, ನಂದೀಶ, ಸಕ್ರಪ್ಪ, ಶೇಷು, ವಿಜಯ, ಶೋಭಾ ನಾಯ್ಕ, ಸಿಡಿಆರ್ ಸೆಲ್ ವಿಭಾಗದ ಉದಯ ಮತ್ತು ರಮೇಶ, ಮಡಕೇರಿ ಠಾಣೆಯ ಯೋಗಿ ಈ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಕಳೆದ 1 ತಿಂಗಳ ಕಾಲ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.
ದರೋಡೆ ಪ್ರಕರಣ; ಮೂವರು ಆರೋಪಿಗಳ ಬಂಧನ
