ಕುಮಟಾ: ಕೇಂದ್ರದಲ್ಲಿರುವುದು ಭ್ರಷ್ಟ ಸರ್ಕಾರ, ರಾಜ್ಯದಲ್ಲಿರುವುದು ಶೇ 40ರ ಕಮಿಷನ್ ಸರ್ಕಾರ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಗರು ಜನಪರ ಕೆಲಸ ಮಾಡದೆ, ಕಾಂಗ್ರೆಸ್ ಹೆಸರು ಹಾಳು ಮಾಡಲು ಪರೇಶ ಮೇಸ್ತಾನ ಪ್ರಕರಣ ಬಳಸಿಕೊಂಡು, ಶಾಂತವಾದ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಸಿದ್ದರು. ಬಳಿಕ ಅಧಿಕಾರಕ್ಕೇರಿದರು. ಇಂದು ಸಿಬಿಐ ಸಲ್ಲಿದ ವರದಿಯಲ್ಲಿ ಸಹಜ ಸಾವು ಎಂದು ಹೇಳುವ ಮೂಲಕ ಬಿಜೆಪಿಗರ ಬಣ್ಣ ಬಯಲು ಮಾಡಿದೆ ಎಂದರು.
ಇಲ್ಲಿನ ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಕಳೆದ ಅವಧಿಯಲ್ಲಿ ನಾನು ಶಾಸಕಳಾಗಿದ್ದಾಗ 1300 ಕೋಟಿ ಅನುದಾನ ತಂದಿದ್ದೇವೆ. ಅದರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಿನ ಮುಖ್ಯಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕಾಮಗಾರಿಗಳ ಶಂಕುಸ್ಥಾಪನೆ ಆಗಮಿಸಿದ್ದರು. ಇದರಿಂದ ವಿಚಲಿತರಾದ ಬಿಜೆಪಿಗರು ಪರೇಶ ಮೇಸ್ತನ ಪ್ರಕರಣ ಬಳಸಿಕೊಂಡು ಜಿಲ್ಲೆಯಲ್ಲಿ ಕೋಮು ಗಲಭೆ ಮಾಡಿದರು. ನಾನು ಶಂಕುಸ್ಥಾಪನೆ ಮಾಡಿದ ಬೃಹತ್ ಯೋಜನೆಗಳು ಈಗ ಉದ್ಘಾಟನೆಯಾಗುತ್ತಿದೆ. ಈಗಿನ ಶಾಸಕರು ಮಾಡಿದ್ದೇನು ಇಲ್ಲ. ಇವರು ಮಾಡಿದ್ದು, ಬರೀ ಭ್ರಷ್ಟಾಚಾರ, ಕಮಿಷನ್ ದಂಧೆ ಎಂದು ಆರೋಪಿಸಿದರು.
ಭಟ್ಕಳದ ಮಾಜಿ ಶಾಸಕ ಮಂಕಾಳ ವೈದ್ಯ, ನಾನು ಶಾಸಕನಾಗಿದ್ದಾಗ ಕ್ಷೇತ್ರಕ್ಕೆ 2 ಸಾವಿರ ಕೋಟಿ ರೂ. ಅನುದಾನ ತಂದಿದ್ದೇನೆ. 7 ಸಾವಿರ ಮನೆ ಮಂಜೂರಿ ಮಾಡಿಸಿದ್ದೇನೆ. ಈ ಬಿಜೆಪಿ ಶಾಸಕರ ಬಳಿ ಒಂದೇ ಒಂದು ಮನೆ ತರಲು ಸಾಧ್ಯವಾಗಿಲ್ಲ. ನಾನು ಮಂಜೂರಿ ಮಾಡಿಸಿದ ಕೆಲ ಮನೆಗಳಿಗೆ ಕೊನೆಯ ಕಂತನ್ನು ಇನ್ನು ಬಿಡುಗಡೆ ಮಾಡಿಲ್ಲ. ಶರಾವತಿ ಕುಡಿಯುವ ನೀರಿನ ಯೋಜನೆ ಕಾಂಗ್ರೆಸ್ನದ್ದು. ಇವರು ಬರೀ ಸುಳ್ಳು ಹೇಳುವುದನ್ನೆ ತಮ್ಮ ಸಾಧನೆ ಎಂದುಕೊAಡಿದ್ದಾರೆ. ಕೋಮು ಸಂಘರ್ಷ ಬೆಳೆಸಿ, ಗಲಾಟೆ ಮಾಡಿಸುವುದು ಬಿಜೆಪಿಗರ ಕಾಯಕ. ಬೆಲೆ ಏರಿಕೆಯಿಂದ ಬಡ, ಮಧ್ಯಮ ವರ್ಗದ ಜನರು ತತ್ತರಿಸಿದ್ದಾರೆ. ಬಿಜೆಪಿಗರು ಮತ್ತೆ ಟೂಲ್ ಕಿಟ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಇನ್ಯಾರಾದರೂ ಸಾಯುತ್ತಾರಾ ಎಂದು ಕಾದು ಕುಳಿತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕುಮಟಾದಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ಹೇಳಿಕೆ
ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಮಾತನಾಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ. ಜನರ ಪ್ರತಿಭಟನೆ, ವಿರೋಧಗಳ ಬಳಿಕ ಆರೋಗ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದರು. ಶೀಘ್ರದಲ್ಲೇ ಆಸ್ಪತ್ರೆ ಕಾಮಗಾರಿಗೆ ಅಡಿಗಲ್ಲು ಹಾಕೋದಾಗಿ ಹೇಳಿದ್ದರು. ಆದರೆ ಇದುವರೆಗೂ ಸಹ ಸರ್ಕಾರಕ್ಕೆ ಪ್ರಸ್ತಾವನೆಯೇ ಸಲ್ಲಿಕೆಯಾಗಿಲ್ಲ. ಈ ವಿಚಾರ ತಿಳಿದು ನಮಗೇ ಆಶ್ಚರ್ಯವಾಗುತ್ತಿದೆ. ಸಚಿವರೇ ಬಂದು ಆಸ್ಪತ್ರೆ ನಿರ್ಮಿಸುವ ಭರವಸೆ ನೀಡ್ತಾರೆ. ಆದರೆ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ ಅಂದರೆ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗೇ ಆಗತ್ತೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಆಸ್ಪತ್ರೆ ನಿರ್ಮಾಣ ಮಾಡೇ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧುಬಂಗಾರಪ್ಪ, ಕಿಸಾನ ಸಂಘದ ಸಚಿನ ಮಿನಾರ್, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ, ಮಾಜಿ ಸಚಿವ ಆರ್ ಎನ್ ನಾಯ್ಕ, ವಿನಯಕುಮಾರ ಸೊರ್ಕೆ, ಮಾಜಿ ಶಾಸಕರಾದ ಜೆ ಡಿ ನಾಯ್ಕ, ಕೆ ಎಚ್ ಗೌಡ, ಕಾಂಗ್ರೆಸ್ ಪ್ರಮುಖರಾದ ಮಂಜುನಾಥ ಎಲ್ ನಾಯ್ಕ, ರತ್ನಾಕರ ನಾಯ್ಕ, ಶಿವಾನಂದ ಹೆಗಡೆ ಕಡತೋಕಾ, ಆರ್ ಎಚ್ ನಾಯ್ಕ, ಭುವನ ಭಾಗ್ವತ್, ಭಾಸ್ಕರ ಪಟಗಾರ, ಇತರರು ಉಪಸ್ಥಿತರಿದ್ದರು.