Slide
Slide
Slide
previous arrow
next arrow

ಯುವಜನೋತ್ಸವದ ಸುತ್ತೋಲೆಯಲ್ಲಿ ಕನ್ನಡದ ಕಡೆಗಣನೆ: ಕಸಾಪ ಜಿಲ್ಲಾಧ್ಯಕ್ಷರ ಖಂಡನೆ

300x250 AD

ಕಾರವಾರ: ಉತ್ತರ ಕನ್ನಡ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಜಿಲ್ಲಾ ಮಟ್ಟದ ಯುವಜನೋತ್ಸವದ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ತಾಲೂಕುಮಟ್ಟದ ಯುವಜನ ಸೇವಾ ಅಧಿಕಾರಿಗಳಿಗೆ ರವಾನಿಸಿರುವ ಸುತ್ತೋಲೆಯಲ್ಲಿ ಕನ್ನಡಕ್ಕೆ ಅವಮಾನವೆಸಗಿದ್ದಾರೆ. ಸುತ್ತೋಲೆ ತಿದ್ದುಪಡಿ ಮಾಡದೇ ಇದ್ದಲ್ಲಿ ಯುವಜನೋತ್ಸವ ನಡೆಯುವ ಸ್ಥಳದಲ್ಲಿಯೇ ಪ್ರತಿಭಟಿಸಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಎಚ್ಚರಿಕೆ ನೀಡಿದ್ದಾರೆ.


ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳು ತಾವು ಹೊರಡಿಸಿರುವ ಸುತ್ತೋಲೆಯಲ್ಲಿ ಸ್ಪರ್ಧೆಗಳ ವಿವರವನ್ನು ನೀಡಿದ್ದು, ಒಂಬತ್ತನೇ ವಿಷಯದಲ್ಲಿ ಆಶುಭಾಷಣ ಸ್ಪರ್ಧೆಗೆ ಕುರಿತಂತೆ ಮಾಹಿತಿ ನೀಡಿದ್ದಾರೆ. ಅಲ್ಲಿ ಹಿಂದಿ ಅಥವಾ ಇಂಗ್ಲೀಷ್ ಭಾಷೆಗೆ ಮಾತ್ರ ಅವಕಾಶ ಎನ್ನುವುದನ್ನು ಉಲ್ಲೇಖಿಸಿ ಬರೆದಿದ್ದಾರೆ. ರಾಜ್ಯ ಸರ್ಕಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ನಡೆಯುವ ಈ ಯುವಜನೋತ್ಸವದಲ್ಲಿ ಕೇವಲ ಎರಡು ಭಾಷೆಗೆ ಮಾತ್ರ ಅವಕಾಶ ಎಂದು ಉಲ್ಲೇಖಿಸಿ ಬರೆದಿರುವುದು ನಿಜಕ್ಕೂ ನಾಡದ್ರೋಹದ ಕೆಲಸವಾಗಿದೆ ಎಂದು ಅವರು ಟೀಕಿಸಿದ್ದಾರೆ.
ರಾಜ್ಯ ಸರ್ಕಾರವು ಸೇರಿದಂತೆ ಇಂದು ಪ್ರತಿಯೊಬ್ಬರು ಆಡಳಿತ ಹಂತದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುತ್ತಿರುವ ಸಂದರ್ಭದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳು ಈ ರೀತಿ ಕನ್ನಡ ಕಡೆಗಣಿಸಿರುವ ರೀತಿಯಲ್ಲಿ ಸುತ್ತೋಲೆ ಹೊರಡಿಸಿರುವುದು ಅಕ್ಷೇಪಾರ್ಹವಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ದೂರವಾಣಿಯ ಮೂಲಕ ಮಾತನಾಡಿದ್ದು, ತಕ್ಷಣ ಆಗಿರುವ ಪ್ರಮಾದವನ್ನು ಸರಿಪಡಿಸುವಂತೆ ಹೇಳಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ಈ ಸುತ್ತೋಲೆಯನ್ನು ತಿದ್ದುಪಡಿಗೊಳಿಸಿ ಕನ್ನಡ ಭಾಷೆಗೆ ಮಾತ್ರ ಅವಕಾಶ ಎನ್ನುವ ಸಂಗತಿಯನ್ನು ಉಲ್ಲೇಖಿಸಿ ಸುತ್ತೋಲೆ ಹೊರಡಿಸುವಂತೆ ಒತ್ತಾಯಿಸಿದ್ದೇನೆ. ಒಂದೊಮ್ಮೆ ಸುತ್ತೋಲೆಯಲ್ಲಿ ಈಗಿರುವ ಸಂಗತಿಯನ್ನು ಬದಲಾಯಿಸದೇ ಮುಂದುವರಿಸಿದರೆ ಯುವಜನೋತ್ಸವ ನಡೆಯುವ ಸ್ಥಳದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top