ಕಾರವಾರ: ಮೀನುಗಾರಿಕೆ ಇಲಾಖೆಯು 2022- 23ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಗ್ರಾಮಪಂಚಾಯತ ವ್ಯಾಪ್ತಿಯ ಕೆರೆಗಳಲ್ಲಿ ಉಚಿತ ಮೀನು ಮರಿ ಬಿತ್ತನೆ ಯೋಜನೆಗೆ ಶಾಸಕಿ ರೂಪಾಲಿ ನಾಯ್ಕ ಮಾಜಾಳಿ ವೈಂಗಣ ದೊಡ್ಡಕೆರೆಯಲ್ಲಿ ಮೀನು ಮರಿ ಬಿತ್ತನೆ ಮಾಡಿ ಯೋಜನೆಗೆ ಚಾಲನೆ ನೀಡಿದರು.
ಈ ಯೋಜನೆಯು ಒಳನಾಡು ಮೀನು ಉತ್ಪಾದನೆಯನ್ನು ಹೆಚ್ಚಿಸುವ ಜೊತೆಗೆ ಗ್ರಾಮೀಣ ಜನತೆಗೆ ಪರ್ಯಾಯ ಉದ್ಯೋಗಾವಕಾಶವನ್ನು ಕಲ್ಪಿಸುವುದಾಗಿದೆ. ಗ್ರಾಮ ಪಂಚಾಯಗಳಲ್ಲಿ ಮೀನು ಕೃಷಿಗೆ ಸೂಕ್ತವಾಗಿರುವ ಕೆರೆಯನ್ನುಆಯ್ಕೆ ಮಾಡಿ ಜಲ ವಿಸ್ತೀರ್ಣಕ್ಕೆ ಅನುಗುಣವಾಗಿ ಗರಿಷ್ಟ 10000 ಮೌಲ್ಯದ ಮೀನುಮರಿಗಳನ್ನು ಬಿತ್ತನೆ ಮಾಡುವುದಾಗಿದೆ. ಸಾಧ್ಯ ಜಿಲ್ಲೆಯಲ್ಲಿ ಒಟ್ಟು 364 ಕೆರೆಗಳನ್ನು ಮೀನು ಮರಿ ಬಿತ್ತನೆ ಮಾಡಲು ಆಯ್ಕೆ ಮಾಡಲಾಗಿದೆ. ಇದರಲ್ಲಿ ಒಟ್ಟು 13.50 ಲಕ್ಷ ಮೀನುಮರಿಗಳನ್ನು ಬಿತ್ತನೆ ಮಾಡಲಾಗುವುದು. ಅಲ್ಲದೆ ಮೀನು ಒಂದು ಪ್ರೋಟೀನ್ಯುಕ್ತ ಆಹಾರವಾಗಿದ್ದು ಗ್ರಾಮೀಣ ಜನರಲ್ಲಿ ಮೀನು ಸೇವನೆಯನ್ನು ಹೆಚ್ಚಿಸಿ ಅಪೌಷ್ಟಿಕತೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಲಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಿಯಾಂಗ ಎಂ., ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರತೀಕ್, ಮಾಜಾಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.