ಮುಂಡಗೋಡ: ಕಳೆದ ಸುಮಾರು ಹದಿನೈದು ವರ್ಷಗಳಿಂದ ಮಣ್ಣು ತುಂಬಿದ್ದ ಕಾಲುವೆಗೆ ಕೊನೆಗೂ ಮರುಜೀವ ಬಂದಿದೆ. ಇದಕ್ಕೆ ಸಾಥ್ ನೀಡಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.
ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಿಗಳ್ಳಿ ಅಣೆಕಟ್ಟಿನಿಂದ ಹಲವಾರು ಗ್ರಾಮಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ಆದರೆ ಡ್ಯಾಮ್ ತುಂಬಿ ಕಾಲುವೆಗಳು ಹೂಳು ತುಂಬಿ ಇದ್ದು ಇಲ್ಲದಂತಾಗಿ ಹೊಲ ಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿತ್ತು. ಇದನ್ನರಿತ ಗ್ರಾಮಸ್ಥರು ಗ್ರಾಮ ಪಂಚಾಯತ್‌ನ ಸಹಕಾರದೊಂದಿಗೆ ನರೇಗಾದಡಿ ಕಾಲುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಈ ಕಾಲುವೆ ಹೂಳೆತ್ತುವ ಕಾಮಗಾರಿಯಲ್ಲಿ 65 ಕೂಲಿಕಾರರು ಕೆಲಸದಲ್ಲಿ ತೊಡಗಿದ್ದು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿದ್ದಾರೆ. 60 ವರ್ಷ ಮೇಲ್ಪಟ್ಟ 6 ಮಂದಿ ಭಾಗಿಯಾಗಿದ್ದರು. ಈವರೆಗೆ 3 ಎನ್‌ಎಮ್‌ಆರ್‌ಗಳ ಸೃಜನೆಯಾಗಿದೆ.
ಈ ವೇಳೆ ಕೂಲಿಕಾರ ಅಶೋಕ ಹಾನಗಲ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುವವರೇ ಹೆಚ್ಚಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗೆ ಅನುಕೂಲವಾದ ಕಾಮಗಾರಿಗಳನ್ನು ನೀಡುತ್ತಿರುವುದು ಸಂತಸವಾಗಿದೆ ಎಂದರು. ಕಾಲುವೆ ಹೂಳೆತ್ತುವ ಮೂಲಕ ಇಲ್ಲಿನ ಕೂಲಿಕಾರರಿಗೆ ನರೇಗಾ ನೆರವಾಗಿದೆ ಎಂದರು.
ತಾಲೂಕು ಪಂಚಾಯತ್ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಸಾಮೂಹಿಕ ಕಾಮಗಾರಿಗಳಿಗೆ ಆದ್ಯತೆ ನೀಡಿದಂತೆ ವೈಯಕ್ತಿಕ ಕಾಮಗಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳಬೇಕು. ಖಾತ್ರಿ ಕೆಲಸದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಬೇಕು ಎಂದರು. ಇನ್ನು ಕೂಲಿಕಾರರಿಗೆ ನೀಡಲಾಗುವ ಅನುಕೂಲತೆಗಳ ಬಗ್ಗೆ ತಿಳಿಸಿದರು. ಕೆಲಸದೊಂದಿಗೆ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಎಫ್‌ಟಿ ಉಷಾ ಹಾನಗಲ್, ಪಂಚಾಯತ್ ಸಿಬ್ಬಂದಿ ಕೊಟೆಪ್ಪ, ಮೇಟ್ ಗಣಪತಿ ಇದ್ದರು.