ಭಟ್ಕಳ: ಆಟೋ ರಿಕ್ಷಾ ಚಾಲಕರು ಸಮಾಜದ ಆಗುಹೋಗುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಾರೆ. ಯಾವುದೇ ಸಮಸ್ಯೆಯಾದಲ್ಲಿ ಜನರ ಸಹಾಯ- ಸಹಕಾರಕ್ಕೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಶಾಸಕ ಸುನೀಲ ನಾಯ್ಕ ಶ್ಲಾಘಿಸಿದರು.
ಇಲ್ಲಿನ ಬಂದರ್ ರಸ್ತೆಯಲ್ಲಿನ ದಿ.ಡಾ.ಯು.ಚಿತ್ತರಂಜನ್ ಆಟೋ ರಿಕ್ಷಾ ನಿಲ್ದಾಣಕ್ಕೆ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಚಾವಣಿ ನಿರ್ಮಿಸಿಕೊಟ್ಟು, ಶುಕ್ರವಾರ ಅದರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸರಕಾರದಿಂದ ಆಟೋ ನಿಲ್ದಾಣಗಳ ಅಭಿವೃದ್ಧಿಗೆ ಅನುದಾನ ವಿಳಂಬವಾಗುತ್ತದೆ. ಹೀಗಾಗಿ ಚಿಕ್ಕಂದಿನಿಂದಲೂ ನನ್ನ ಮೇಲೆ ಆಟೋ ಚಾಲಕರ ಋಣವಿದ್ದು, ಅದನ್ನು ಈ ಮೂಲಕ ತೀರಿಸುವ ಅವಕಾಶ ಸಿಕ್ಕಂತಾಗಿದೆ. ಈ ರಿಕ್ಷಾ ನಿಲ್ದಾಣದ ನಿರ್ಮಾಣಕ್ಕೆ ಸಾಕಷ್ಟು ಅಡೆತಡೆಗಳು ಬಂದಿದ್ದು, ಅವೆಲ್ಲದರ ನಡುವೆ ಆಟೋ ಚಾಲಕರ ಅನೂಕೂಲಕ್ಕೆ ಈ ನಿಲ್ದಾಣ ನಿರ್ಮಿಸಲಾಗಿದೆ. ಕೇವಲ ರಿಕ್ಷಾ ನಿಲ್ದಾಣದ ಬೇಡಿಕೆಯೊಂದೇ ಅಲ್ಲದೇ, ಸಂಘದ ಅಭಿವೃದ್ಧಿಗೆ ವೈಯಕ್ತಿಕವಾಗಿ ಸಹಾಯ ಮಾಡಲು ನಾನು ಸಿದ್ಧನಿದ್ದೇನೆ ಎಂದರು.
ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಆಟೋ ರಿಕ್ಷಾ ಚಾಲಕರ ಬಹುಬೇಡಿಕೆಯಾದ ಚಾವಣಿ ನಿರ್ಮಾಣದ ಜೊತೆಗೆ ಇನ್ನೊಂದು ಪ್ರಮುಖ ಬೇಡಿಕೆಯಾಗಿರುವ ಸಿಎನ್‌ಜಿ ಪಂಪ್ ನಿರ್ಮಾಣ ಮಾಡಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ, ಜಿಲ್ಲೆಯಲ್ಲಿನ ಆರು ಶಾಸಕರಿಗೆ ಆಟೋ ರಿಕ್ಷಾ ಚಾಲಕರಿಗೆ ಸರಕಾರದಿಂದ ಯಾವುದಾದರು ಅನುದಾನದಲ್ಲಿ ರಿಕ್ಷಾ ನಿಲ್ದಾಣ ನಿರ್ಮಿಸಿಕೊಡುವಂತೆ ಬೇಡಿಕೆಯ ಮನವಿ ಸಲ್ಲಿಸಲಾಗಿತ್ತು. ಈ ಪೈಕಿ ಶಾಸಕ ಸುನೀಲ ನಾಯ್ಕ ಅವರು ನಮಗೆ ಮೊದಲಿಗರಾಗಿ ಸ್ಪಂದಿಸಿದರು. ಭಟ್ಕಳದ ಮಟ್ಟಿಗೆ ಶಾಸಕ ಸುನೀಲ ನಾಯ್ಕ ಅವರು ಆಟೋ ಚಾಲಕರಿಗೆ ಹಾಗೂ ಸಂಘಕ್ಕೆ ಸಾಕಷ್ಟು ಸಹಾಯ- ಸಹಕಾರ ನೀಡಿದ್ದಾರೆ. ಮುಂಬರುವ ದಿನದಲ್ಲಿ ಇವೆಲ್ಲದರ ಪ್ರತಿಫಲವಾಗಿ ನಿಮ್ಮ ಋಣ ತೀರಿಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ, ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ದಿವಂಗತ ಡಾ.ಯು.ಚಿತ್ತರಂಜನ್ ಆಟೋ ರಿಕ್ಷಾ ನಿಲ್ದಾಣದ ಅಧ್ಯಕ್ಷ ಪಾಂಡು ನಾಯ್ಕ, ಕೋವಿಡ್ ಸಮಯದಲ್ಲಿ ಉತ್ತಮ ಕೆಲಸ ಮಾಡಿದ ಆಟೋ ಚಾಲಕ ಶ್ರೀನಿವಾಸ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಿದರು.
ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಆಟೋ ರಿಕ್ಷಾ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಆಟೋ ಚಾಲಕರಾದ ಲಕ್ಷ್ಮಣ ನಾಯ್ಕ, ದಿನೇಶ ನಾಯ್ಕ, ಕೃಷ್ಣ ನಾಯ್ಕ ತಲಗೇರಿ ಸೇರಿದಂತೆ ಮುಂತಾದವರು ಇದ್ದರು.