ಕಾರವಾರ: ನಗರದ ಹಿಂದೂ ಹೈಸ್ಕೂಲ್ 125 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನೆಲ್ಲ ಒಳಗೊಂಡ ಹಿಂದೂ ಹೈಸ್ಕೂಲ್ ಅಲ್ಯುಮ್ನಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಲಾಗಿದ್ದು, ಆ ಮೂಲಕ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೆರವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಟ್ರಸ್ಟಿನ ಉಪಾಧ್ಯಕ್ಷ ಪ್ರೀತಮ್ ಮಾಸೂರಕರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರವಾರ ಎಜ್ಯುಕೇಶನ್ ಟ್ರಸ್ಟ್ನ ಹಿಂದೂ ಹೈಸ್ಕೂಲ್, ಸುಮತಿ ದಾಮಲೆ ಬಾಲಕಿಯರ ಪ್ರೌಢಶಾಲೆ ಹಾಗೂ ಬಾಲಮಂದಿರ ಶಾಲೆಗಳಲ್ಲಿ ಎಲ್ಲಾ ವರ್ಗದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿ ಆಯ್ದ 170 ವಿದ್ಯಾರ್ಥಿಗಳಿಗೆ ಒಟ್ಟು 4.50 ಲಕ್ಷ ರೂ. ಆರ್ಥಿಕ ಸಹಾಯವನ್ನು ಟ್ರಸ್ಟ್ನಿಂದ ನೀಡಲಾಗುತ್ತದೆ. ಈ ಸಂಬಂಧ ನ.18ರಂದು ಹೈಸ್ಕೂಲ್ನ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಉಳಿದ ಬಡ ವಿದ್ಯಾರ್ಥಿಗಳಿಗೆ ಮುಂದಿನ ಹಂತದಲ್ಲಿ ನೆರವು ನೀಡುವ ಉದ್ದೇಶ ಇದೆ ಎಂದರು.
ಈಗಾಗಲೇ ಈ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಭವಿಷ್ಯದ ಉದ್ಯೋಗ ಮಾರ್ಗದರ್ಶನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೋವಿಡ್ 19ನಿಂದ ತಂದೆ ಅಥವಾ ತಾಯಿ ಅಥವಾ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ಬೆಂಗಳೂರಿನ ಎಕ್ಸಿಲರೇಟ್ ಇಂಡಿಯಾ ಫೌಂಡೇಷನ್ ನೆರವಿನಿಂದ ಧನಸಹಾಯ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಿ.ಪಿ.ಕಾಮತ್ ಮಾತನಾಡಿ, 1897ರಲ್ಲಿ ವಾಮನ್ ಮಂಗೇಶ್ ದುಬಾಶಿ ಮತ್ತು ಹರಿಬಾಬು ಕಾಮತ್ ಪ್ರಾರಂಭಿಸಿದ ಶಾಲೆಯಲ್ಲಿ ಓರ್ವ ವಿದ್ಯಾರ್ಥಿಗೆ ಇಬ್ಬರು ಶಿಕ್ಷಕರು ಇದ್ದರು. ಆದರೆ ಈಗ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಸರ್ಕಾರ ಅನುದಾನ ನೀಡುವುದನ್ನು ನಿಲ್ಲಿಸಿದೆ ಎಂದು ಹೇಳಿದರು.
ಈ ವೇಳೆ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಅನಿರುದ್ಧ ಹಳದೀಪುರಕರ್, ಚಾರಿಟೇಬಲ್ ಟ್ರಸ್ಟ್ ಖಜಾಂಚಿ ಸಂಜಯ್ ಶಾನಭಾಗ ಇದ್ದರು.