ಹಳಿಯಾಳ: ಜಿಲ್ಲಾ ಅಧಿಕಾರಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯ ಮತ್ತು ಸೂಚನೆಗಳನ್ನು ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಪಾಲಿಸಬೇಕೆಂದು ಆಗ್ರಹಿಸಿ ಕಾರ್ಖಾನೆಯ ಪ್ರವೇಶ ದ್ವಾರದ ಎದುರಿಗೆ ಸೋಮವಾರ ಸಂಜೆ ಕಬ್ಬು ಬೆಳೆಗಾರರು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.
ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ ಈ ವೇಳೆ ಮಾತನಾಡಿ, ಸಕ್ಕರೆ ಆಯುಕ್ತರು, ಎಸಿ, ಡಿಸಿ ಯವರ ಸಭೆಯಲ್ಲಿ ಆಗಿರುವ ನಿರ್ಣಯಗಳನ್ನು ಮತ್ತೂ ಸೂಚನೆಯಂತೆಯೇ ಹಳಿಯಾಳದ ಕಬ್ಬು ಕಟಾವಿಗೆ ಪ್ರಥಮ ಆದ್ಯತೆ ನೀಡಬೇಕು ಮತ್ತು 500 ಕಬ್ಬು ಕಟಾವು ಗ್ಯಾಂಗ್ ನೀಡಬೇಕು ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆಯ ಕಬ್ಬು ವಿಭಾಗದ ವ್ಯವಸ್ಥಾಪಕ ತುಕಾರಾಮ ಪಾಟೀಲ್, ಹಳಿಯಾಳಕ್ಕೆ ಆದ್ಯತೆ ನೀಡಲಾಗುತ್ತಿದೆ. ರೈತರು ಸಹಕರಿಸಬೇಕು ಎಂದು ವಿನಂತಿಸಿದ ಬಳಿಕ ಕಬ್ಬು ಕಟಾವು ಗ್ಯಾಂಗ್ ಪಟ್ಟಿಯನ್ನು ಮುಖಂಡರಿಗೆ ನೀಡಿದರು. ಈ ವೆಳೆ ಈ ಪಟ್ಟಿಯನ್ನು ಒಪ್ಪದ ರೈತ ಮುಖಂಡರು ನಮಗೆ ಕಚ್ಚಾ ಪಟ್ಟಿ ಬೇಡ, ವ್ಯವಸ್ಥಿತವಾಗಿರುವ ಅಧಿಕೃತ ಪಟ್ಟಿ ನೀಡುವಂತೆ ಒತ್ತಾಯಿಸಿದರು.
ಮಂಗಳವಾರ ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿ ಅಧಿಕೃತವಾಗಿ ಮಾಹಿತಿ ನೀಡುವಂತೆ ಆಗ್ರಹಿಸಲಾಯಿತು. ಇದಕ್ಕೆ ಕಾರ್ಖಾನೆಯವರು ಒಪ್ಪಿಗೆ ಸೂಚಿಸಿದ್ದು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಂಕರ ಕಾಜಗಾರ, ಎನ್ ಎಸ್ ಜಿವೋಜಿ, ಮಂಜುಳಾ ಗೌಡಾ, ಬಸವರಾಜ ಬೆಂಡಿಗೇರಿಮಠ, ಪುಂಡ್ಲಿಕ ಗೊಡಿಮನಿ, ಸಾತೂರಿ ಗೋಡಿಮನಿ, ಬಳಿರಾಮ ಮೊರಿ ಮೊದಲಾದವರು ಇದ್ದರು.