ದಾಂಡೇಲಿ: ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಅಧ್ಯಾಯ ಮತ್ತು ನಗರದ ಪಾಟೀಲ್ ನರ್ಸಿಂಗ್ ಹೋಮ್ ಇವರ ಸಹಯೋಗದಲ್ಲಿ ಪಾಟೀಲ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿರುವ ಉಚಿತ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು.
ದಾಂಡೇಲಿ, ಹಳಿಯಾಳ ಮತ್ತು ಜೊಯಿಡಾ ತಾಲೂಕಿನ ಆಯ್ದ ಮತ್ತು ಅತೀ ಅವಶ್ಯವಿರುವ ಹಾಗೂ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದು, ತೀವ್ರ ಅನಾರೋಗ್ಯಗೊಂಡಿದ್ದ 16 ರೋಗಿಗಳನ್ನು ಈ ಮೊದಲೆ ಗುರುತಿಸಿ, ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿತ್ತು. ಈ ಶಸ್ತ್ರಚಿಕಿತ್ಸಾ ಶಿಬಿರವನ್ನು ಡಾ.ಜ್ಯೋತಿ ಪಾಟೀಲ್ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಶಿಬಿರದ ರೂವಾರಿ ಹಾಗೂ ಸಂಘಟಕರಾದ ಡಾ.ಮೋಹನ ಪಾಟೀಲ್ ಮಾತನಾಡಿ, ಅರ್ಹ ಬಡವರಿಗೆ ಆರೋಗ್ಯ ನೆರವು ನೀಡುವ ಸಂಕಲ್ಪವನ್ನಿಟ್ಟುಕೊಂಡು ಈ ಶಿಬಿರವನ್ನು ಆಯೋಜಿಸಲಾಗಿದೆ. ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ, ಎ.ಎಸ್.ಐ’ನ ಕರ್ನಾಟಕ ರಾಜ್ಯ ಅಧ್ಯಾಯ ವಿಭಾಗದಿಂದ ಸೇರಿದಂತೆ ಒಟ್ಟು ತಜ್ಞ ವೈದ್ಯರುಗಳು ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ. ದುಬಾರಿ ವೆಚ್ಚವನ್ನು ವ್ಯಯಿಸಿ ಮಾಡಬೇಕಾದ ಶಸ್ತ್ರಚಿಕಿತ್ಸೆಗಳನ್ನು ಈ ಶಿಬಿರದಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಇದೊಂದು ಪರಿಪೂರ್ಣತೆಯ ಶಿಬಿರ ಎಂದ ಅವರು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದಿರುವ ವೈದ್ಯರುಗಳು ಈ ಶಿಬಿರದಲ್ಲಿ ಭಾಗವಹಿಸಿರುವುದು ನಿಜಕ್ಕೂ ಸಂತಸವನ್ನು ತಂದಿರುವುದಲ್ಲದೇ ಶಿಬಿರದ ಆಯೋಜನೆಗೂ ಸ್ಪೂರ್ತಿ ನೀಡಿದಂತಾಗಿದೆ ಎಂದರು.
ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷರಾದ ಡಾ.ಬಿ.ಎನ್.ಪಾಟೀಲ ಅವರು ಡಾ.ಮೋಹನ ಪಾಟೀಲ್ ಅವರು ಹಾಗೂ ಅವರ ತಂಡ ಅತ್ಯುತ್ತಮವಾಗಿ ಶಿಬಿರವನ್ನು ಸಂಘಟಿಸಿದ್ದಾರೆ. ಇದು ಶಿಬಿರ ಎನ್ನುವುದಕ್ಕಿಂತಲೂ ವ್ಯಕ್ತಿಗೆ ಮರುಜೀವ ಕೊಡುವ ಪುಣ್ಯ ಕಾರ್ಯ ಎಂದು ಹೇಳಿ, ಶಿಬಿರಕ್ಕೆ ಶುಭ ಕೋರಿದರು. ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಸಂಸ್ಥೆಯು ಉಪಯುಕ್ತ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದರು.
ವೇದಿಕೆಯಲ್ಲಿ ನಗರ ಸಭೆಯ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ಸಿಪಿಐ ಬಿ.ಎಸ್.ಲೋಕಾಪುರ, ಸೋಷಿಯಲ್ ವೆಲ್ಪೇರ್ ಕೌನ್ಸಿನಿನ ನಿರ್ದೇಶಕರಾದ ಡಾ.ಡಿ.ಮಾರುಥ್ ಪಾಂಡ್ಯನ್, ಕಿಮ್ಸ್ ಆಸ್ಪತ್ರೆಯ ಪ್ರಾಚಾರ್ಯರಾದ ಡಾ.ಈಶ್ವರ್ ಹೊಸಮನಿ, ಕಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ಗುರುಶಾಂತಪ್ಪ ಎಲಗಚ್ಚಿನ್ ಮತ್ತು ಡಾ.ನಾರಾಯಣ ಹೆಬಸೂರು, ತುಮಕೂರಿನ ಡಾ.ಚಂದ್ರಶೇಖರ್ ಎನ್., ಬೆಂಗಳೂರಿನ ಡಾ.ಶಿವರಾಮ, ಮೈಸೂರಿನ ಡಾ.ದಿನೇಶ್ ಹಾಗೂ ದಾಂಡೇಲಿಯ ಐ.ಎಂ.ಎ ಸಂಗಟನೆಯ ಅಧ್ಯಕ್ಷರಾದ ಡಾ.ಸೈಯದ್, ಡಾ. ಎಸ್.ಎಲ್.ಕರ್ಕಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಶಿಬಿರ ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಗರದ ರೋಟರಿ, ಐ.ಎಂ.ಎ ಹಾಗೂ ಇನ್ನಿತರ ಸಂಸ್ಥೆಗಳ ಪ್ರಮುಖರು, ಗಣ್ಯ ಮಹನೀಯರು ಉಪಸ್ಥಿತರಿದ್ದರು. ಡಾ.ಮೋಹನ್ ಪಾಟೀಲ್ ಸ್ವಾಗತಿಸಿದರು. ಡಾ.ಎಸ್.ಎಲ್.ಕರ್ಕಿಯವರು ಶಿಬಿರದಲ್ಲಿ ಭಾಗವಹಿಸಿದ ವೈದ್ಯರುಗಳನ್ನು ಪರಿಚಯಿಸಿದರು. ಡಾ.ಎನ್.ಐ.ಹೆಬಸೂರ ವಂದಿಸಿದರು. ಸೋಮಕುಮಾರ್.ಎಸ್ ಮತ್ತು ಸಹನಾ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಜ್ಯೋತಿ ಪಾಟೀಲ್, ವಿಜಯ ಕರ್ಕಿ, ಡಾ.ಪುಷ್ಕ್ಕರ್ ಪಾಟೀಲ್, ಡಾ.ತನ್ಮಯ ಪಾಟೀಲ್ ಮತ್ತು ಪಾಟೀಲ್ ಆಸ್ಪತ್ರೆಯ ಸಿಬ್ಬಂದಿಗಳು ಸಹಕರಿಸಿದರು.