ಅಂಕೋಲಾ : ಪಟ್ಟಣದ ವಾಜಂತ್ರಿ ಕೇರಿಯ ಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡ ಘಟನೆ ನಡೆದಿದೆ. ಗೋಪಿನಾಥ ಮಹಾಲೆಯವರಿಗೆ ಸೇರಿದ ಹಳೆಯ ಮನೆಯನ್ನು ಬಾಡಿಗೆ ನೀಡಲಾಗಿತ್ತು. ಈ ಮನೆಯಲ್ಲಿ ಬಸ್ಟಾಂಡ್ ಪಕ್ಕ ಹೇರ್ ಸಲೂನ್ ನಡೆಸುವ ಚಂದು ಎನ್ನುವರ ಕುಟುಂಬ ವಾಸವಾಗಿತ್ತು ಎನ್ನಲಾಗಿದ್ದು,ಕುಟುಂಬಸ್ಥರು ಮನೆಯಲ್ಲಿ ಇಲ್ಲದ ವೇಳೆ ರಾತ್ರಿ 8 ರ ಸುಮಾರಿಗೆ ಮನೆಯೊಳಗಿಂದ ಭಾರೀ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ.
ಕೂಡಲೇ ಸುತ್ತಮುತ್ತಲಿನ ಕೆಲ ಯುವಕರು ಮನೆಯ ಬಾಗಿಲ ಒಡೆದು ಮನೆಯೊಳಗಿನ ಗ್ಯಾಸ್ ಸಿಲಿಂಡರಗಳನ್ನು ಹೊರ ಸಾಗಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ.. ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿಲು ಹರಸಾಹಸಪಟ್ಟರೂ ಕೂಡಾ ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಟಿವಿ ಸ್ಟ್ಯಾಂಡ್, ಪ್ರಿಜ್, ಗ್ರ್ಯಾಂಡರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳು,ಬಟ್ಟೆ ಪೀಠೋಪಕರಣ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.
ಗೋದ್ರೆಜ್ ಕಪಾಟ್ ಹಾಗೂ ಕಬೋರ್ಡ್ನಲ್ಲಿದ್ದ ಬೆಲೆಬಾಳುವ ವಸ್ತುಗಳು,ಅಮೂಲ್ಯ ಕಾಗದ ಪತ್ರಗಳು ಬೆಂಕಿಗೆ ಆಹುತಿಯಾಗಿದ್ದು, ದಟ್ಟ ಹೊಗೆಯ ನಡುವೆಯೂ ಮನೆಯವರು ಕೊನೆಯ ಆಸೆಯಿಂದ ಯಾವುದಾದರೂ ವಸ್ತುಗಳು ಉಳಿದಿರಬಹುದೇ ಎಂದು ಹುಡುಕಾಡುತ್ತಿರುವ ದೃಶ್ಯ ಕರುಳು ಚುರ್ ಎನ್ನುವಂತಿತ್ತು. ಪಿಎಸೈ ಮಹಾಂತೇಶ ವಾಲ್ಮೀಕಿ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿದರು.ಅಗ್ನಿ ಶಮನಕ್ಕೆ ಸಂಬಂಧಿಸಿದ ಇಲಾಖೆಗಳ ಜೊತೆ ಸ್ಥಳೀಯರು ಸಹಕರಿಸಿದರು.ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಅವಘಡ ಸಂಭವಿಸಿರುವ ಸಾಧ್ಯತೆಯಿದ್ದು,ನಿಖರ ಕಾರಣ ಮತ್ತು ಹಾನಿಯ ಅಂದಾಜು ತಿಳಿದು ಬರಬೇಕಿದೆ.