ಕಾರವಾರ: ನಗರದ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಕನಕದಾಸ ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಭಾಗವಹಿಸಿ ಮಾತನಾಡಿ, ಕನಕದಾಸರು ಸಮಾಜದಲ್ಲಿ ಸಮಾನತೆ ತರಲು ಸಾಹಿತ್ಯದ ಮೂಲಕ ಪ್ರಯತ್ನಿಸಿದರು ಅವರ ತತ್ವ ಸಿದ್ದಾತಗಳನ್ನು ಅರಿತು ನಾವುಗಳು ಬದುಕಬೇಕು. 16 ನೇ ಶತಮಾನದಲ್ಲಿ ಸಮಾಜದ ಮನ ಪರಿವರ್ತನೆ ಮಾಡಿ ಜಾಗೃತಿ ಮೂಡಿಸುವಲ್ಲಿ ಕನಕದಾಸರ ಕೊಡುಗೆ ಅಪಾರ ಎಂದರು.
ಕನಕದಾಸರು ಸಮಾನತೆಯ ಬಗ್ಗೆ ಅನೇಕ ಪದ್ಯ ರಚಣೆ ಮಾಡಬೇಕಾದರೆ ಅಂದಿನ ಕಾಲದ ಸಾಮಾಜಿಕ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಅರಿಯಬೇಕು. ಅಲ್ಲದೇ ಕೆಳ ವರ್ಗದವರಿಗೆ ಸಮಾಜದಲ್ಲಿ ಸಮಾನ ಹಕ್ಕು ಇರಲಿಲ್ಲ. ಹೀಗಾಗಿ ಮನುಷ್ಯನ ಮನದಲ್ಲಿದ್ದ ಕಲ್ಮಶವನ್ನು ಕನಕದಾಸರು ಪದ್ಯಗಳ ಮೂಲಕ ತೆಗೆಯುವ ಕೆಲಸ ಮಾಡಿದ್ದಾರೆ. ಇದರೊಂದಿಗೆ ದೈವ ಭಕ್ತಿಯು ಇದ್ದ ಅವರು ಸಮಾನತೆಗೆ ದಾಸ ಸಾಹಿತ್ಯ ಪ್ರಾರಂಭಿಸಿದ ಮೊದಲಿಗರು ಎಂದರು.
ಇನ್ನು ನಾಡಿನ ದಿಟ್ಟ ಮಹಿಳೆ ಓಬವ್ವ ನಾಡಿನ ರಕ್ಷಣೆಗೆ ಪ್ರಾಣವನ್ನೇ ನೀಡಿದ ದಿಟ್ಟ ಹೆಣ್ಣು.ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ನಾಡಿನ ರಕ್ಷಣೆಗೆ ಜೀವ ನೀಡುವುದು ವೀರ ಮಹಿಳೆಯ ಲಕ್ಷಣ. ಅವರ ಹೆಸರು ನೆನೆಸಿಕೊಂಡರು ಮೈ ನವೀರೇಳುವಂತೆ ತಮ್ಮ ಛಾಪು ನೀಡಿ ಹೋದ ಮಹಿಳೆಯನ್ನು ಎಲ್ಲರೂ ಅನುಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಮಂಜುನಾಥ ಗಾಂವ್ಕರ ಬರ್ಗಿ ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕನಕದಾಸ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಹಾಗೂ ಗಾಯನ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ, ಹೆಚ್ಚಿವರಿ ಪೊಲೀಸ್ ಅಧೀಕ್ಷಕ ಬದರಿನಾಥ ಎಸ್, ತಹಸೀಲ್ದಾರ ನಿಶ್ಚಲ ನರೋನ, ಡಿ ಡಿ ಪಿ ಯು ಹನುಮಂತಪ್ಪ ನಿಟ್ಟೂರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.