ಶಿರಸಿ: ಇಲ್ಲಿನ ಹಿಲ್ಲೂರು ಯಕ್ಷಮಿತ್ರ ಬಳಗದ ವಾರ್ಷಿಕೋತ್ಸವದ ಅಂಗವಾಗಿ ತಾಳಮದ್ದಲೆ, ಸಮ್ಮಾನ, ಯಕ್ಷಗಾನ ಕಾರ್ಯಕ್ರಮವನ್ನು ನ.12ರ ಮಧ್ಯಾಹ್ನ 2.30ರಿಂದ ನಗರದ ಟಿಎಂಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರಸಿದ್ಧ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ತಿಳಿಸಿದ್ದಾರೆ.
ಸಂಜೆ 5ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಹೆಸರಾಂತ ಭಾಗವತ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಅವರಿಗೆ ಗೌರವ ಸಮ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಈಚೆಗಷ್ಟೇ ಹೊಸ್ತೋಟ ಮಂಜುನಾಥ ಭಾಗವತ್ ಪ್ರಶಸ್ತಿ ಕೂಡ ಸ್ವೀಕರಿಸಿದ ಮೊಟ್ಟೆಗದ್ದೆ ಅವರು ಸಂಸ್ಕೃತ ಬಲ್ಲ ಕನ್ನಡದ ಭಾಗವತರೂ ಹೌದು. ಗಾನ ಸಂಹಿತೆ ಕೃತಿಯ ಮೂಲಕವೂ ಜನ ಮನ್ನಣೆ ಗಳಿಸಿದ ಭಾಗವತರನ್ನು ಹಿಲ್ಲೂರು ಯಕ್ಷಮಿತ್ರ ಬಳಗ ಅಭಿನಂದಿಸಲಿದೆ. ಜೊತೆಗೆ ಯಕ್ಷಾರಾಧಕ ರಘುಪತಿ ನಾಯ್ಕ ಹೆಗ್ಗರಣಿ ಅವರಿಗೆ ಸಹಾಯಧನದ ನೆರವು, ಊದಬತ್ತಿ ವಿನಾಯಕ ಎಂದೇ ಹೆಸರಾದ ವಿನಾಯಕ ಗಣಪತಿ ಹೆಗಡೆ ಅವರಿಗೆ ಪ್ರೋತ್ಸಾಹಕ ಸಮ್ಮಾನ ನಡೆಯಲಿದೆ ಎಂದು ಹಿಲ್ಲೂರು ತಿಳಿಸಿದ್ದಾರೆ.
ಸಂಜೆ 5ಕ್ಕೆ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಟಿಎಂಎಸ್ ಅಧ್ಯಕ್ಷ ಜಿ.ಎಮ್.ಹೆಗಡೆ ಹುಳಗೋಳ ವಹಿಸಿಕೊಳ್ಳುವರು. ಸಿಗಂಧೂರು ಕ್ಷೇತ್ರದ ಪ್ರಧಾನ ಅರ್ಚಕ ಎಸ್.ಪಿ.ಶೇಷಗಿರಿ ಭಟ್ಟ ಅವರು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನಮನೆ, ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಶಿರಸಿ, ಸೆಲ್ಕೋ ಸಿಇಓ ಮೋಹನ ಭಾಸ್ಕರ್ ಹೆಗಡೆ, ಯಲ್ಲಾಪುರ ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ ಪಾಲ್ಗೊಳ್ಳುವರು.
ಇದಕ್ಕೂ ಮುನ್ನ 2.30ಕ್ಕೆ ‘ಕೃಷ್ಣ ಸಂಧಾನ- ಕರ್ಣಭೇದನ’ ತಾಳಮದ್ದಲೆಯನ್ನು ಯಕ್ಷಗೆಜ್ಜೆ ತಂಡ ನಡೆಸಿಕೊಡಲಿದ್ದು, ಹಿಮ್ಮೇಳದಲ್ಲಿ ಗಜಾನನ ಭಟ್ಟ ತುಳಗೇರಿ, ಮಂಜುನಾಥ ಹೆಗಡೆ ಕಂಚಿಮನೆ ಪಾಲ್ಗೊಳ್ಳುವರು. ಅರ್ಥದಾರಿಗಳಾಗಿ ನಿರ್ಮಲಾ ಹೆಗಡೆ ಗೋಳಿಕೊಪ್ಪ, ಲತಾ ಗಿರಿಧರ ಹೊನ್ನೆಗದ್ದೆ, ರೋಹಿಣಿ ಹೆಗಡೆ, ರೇಣುಕಾ ನಾಗರಾಜ, ಸಂಧ್ಯಾ ಅಜಯ್, ಸ್ಮಿತಾ ಭಟ್ಟ, ಸಂಧ್ಯಾ ಶಾಸ್ತ್ರಿ, ಜ್ಯೋತಿ ಭಟ್ಟ ಪಾಲ್ಗೊಳ್ಳುವರು.
ಸಭಾ ಕಾರ್ಯಕ್ರಮದ ಬಳಿಕ ‘ಭಕ್ತ ಸುಧನ್ವ’ ಯಕ್ಷಗಾನ ಪ್ರದರ್ಶನ ಆಗಲಿದ್ದು, ಹಿಮ್ಮೇಳದಲ್ಲಿ ಗಣಪತಿ ಭಟ್ಟ ಮೊಟ್ಟೆಗದ್ದೆ, ರಾಮಕೃಷ್ಣ ಹೆಗಡೆ, ಅನಿರುದ್ಧ ಹೆಗಡೆ ವರ್ಗಾಸರ, ಪ್ರಸನ್ನ ಭಟ್ಟ ಹೆಗ್ಗಾರ ಪಾಲ್ಗೊಳ್ಳುವರು. ಮುಮ್ಮೇಳದಲ್ಲಿ ಶಂಕರ ಹೆಗಡೆ ನೀಲ್ಕೊಡು, ಈಶ್ವರ ನಾಯ್ಕ ಮಂಕಿ, ನಾಗರಾಜ ಭಟ್ಟ ಕುಂಕಿಪಾಲ, ಸನ್ಮಯ ಭಟ್ಟ ಮಲವಳ್ಳಿ, ಮಂಜುನಾಥ ಹೆಗಡೆ ಹಿಲ್ಲೂರು, ಕಾರ್ತಿಕ ಕಣ್ಣಿಮನೆ, ದೀಪಕ ಭಟ್ಟ ಕುಂಕಿ ಭಾಗವಹಿಸಲಿದ್ದಾರೆ. ಮಾಬ್ಲೇಶ್ವರ ಗೌಡ ಹಾರೆಕೊಪ್ಪ ಪ್ರಸಾದನ ಸಹಕಾರ, ಧ್ವನಿ ವರ್ಧಕವನ್ನು ಪಿ.ಪಿ.ಹೆಗಡೆ, ನಾಗರಾಜ ಜೋಶಿ ಸೋಂದಾ ನಿರ್ವಹಣೆ ಮಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.