Slide
Slide
Slide
previous arrow
next arrow

ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಜಿಲ್ಲಾಡಳಿತದ ಕ್ರಮ: ದತ್ತು ಯೋಜನೆ ಜಾರಿಗೆ

300x250 AD

ಕಾರವಾರ: ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟವನ್ನ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಶೈಕ್ಷಣಿಕ ದತ್ತು ಕಾರ್ಯಕ್ರಮವನ್ನ ರೂಪಿಸಿದ್ದು ಈ ಹಿನ್ನಲೆಯಲ್ಲಿ ಜಿಲ್ಲೆಯ ಸುಮಾರು 33 ಸರ್ಕಾರಿ ಶಾಲೆಗಳನ್ನ ಅಧಿಕಾರಿಗಳು ದತ್ತು ಪಡೆದಿದ್ದಾರೆ.
ಸರ್ಕಾರಿ ಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿನ ಸಂಪನ್ಮೂಲಗಳನ್ನ ಗರಿಷ್ಟ ಪ್ರಮಾಣದಲ್ಲಿ ಬಳಕೆ ಮಾಡಿ ಶಿಕ್ಷಣ ಸಂಸ್ಥೆಗಳ ಸಮಗ್ರ ಅಭಿವೃದ್ದಿಗೆ ಶ್ರಮಿಸಲು ರಾಜ್ಯಮಟ್ಟದಿಂದ ತಾಲೂಕು ಮಟ್ಟದ ಎಲ್ಲಾ ಹಂತದ ಅಧಿಕಾರಿಗಳು ಒಂದೊಂದು ಶಾಲೆ ಕಾಲೇಜನ್ನು ದತ್ತು ನೀಡುವ ಶೈಕ್ಷಣಿಕ ದತ್ತು ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಒಟ್ಟು 33 ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರವಾರ ಶೈಕ್ಷಣಿಕ ಜಿಲ್ಲೆಯ ಐದು ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲೆಗಳನ್ನ ದತ್ತು ಪಡೆದು ಕಾರ್ಯಕ್ರವನ್ನು ಪ್ರಾರಂಭಿಸಿದ್ದಾರೆ.
ದತ್ತು ಪಡೆದ ಅಧಿಕಾರಿಗಳು ಪ್ರತಿ ತಿಂಗಳಿಗೆ ಕನಿಷ್ಟ ಒಂದು ಅಥವಾ ಎರಡು ಬಾರಿ ಭೇಟಿ ನೀಡಿ ಶಾಲೆಗಳ ಶೈಕ್ಷಣಿಕ ಪ್ರಗತಿಯನ್ನು ಅವಲೋಕಿಸಿ ಸೂಕ್ತ ಸಲಹೆಗಳನ್ನು ನೀಡಬೇಕಾಗಿದೆ. ಇದಲ್ಲದೇ ಅಧಿಕಾರಿಗಳು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುವುದು, ವಿದ್ಯಾರ್ಥಿಗಳ ಗುರಿಗಳನ್ನ ತಿಳಿದು ಅವುಗಳನ್ನ ಸಾಧಿಸಲು ಪ್ರೇರಣೆ ನೀಡುವ, ತಮ್ಮ ವೃತ್ತಿಯ ಬಗ್ಗೆ ಮಾಹಿತಿ ಅನುಭವಗಳನ್ನ ನೀಡುವ ಕಾರ್ಯ ಮಾಡಬೇಕಾಗಿದೆ.
ಶಾಲೆಯ ಶಿಕ್ಷಕರು, ಪ್ರಾಂಶುಪಾಲರು, ಪಾಲಕರ ಜೊತೆ ಚರ್ಚೆ ನಡೆಸಿ ಶಾಲೆ ಕೈಗೊಳ್ಳುತ್ತಿರುವ ಉತ್ತಮ ಕಾರ್ಯಗಳ ಮಾಹಿತಿ ಪಡೆದು ಮಾರ್ಗದರ್ಶನ ದತ್ತು ಪಡೆದ ಅಧಿಕಾರಿಗಳು ಮಾಡಬೇಕಾಗಿದೆ. ಶಾಲೆಯಲ್ಲಿನ ಕುಂದುಕೊರತೆಗಳನ್ನ ವೀಕ್ಷಿಸಿ ಅದನ್ನು ಬಗೆಹರಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕರದ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್ ತಿಳಿಸಿದ್ದಾರೆ.

ಯಾರ್ಯಾರಿಗೆ ಯಾವ ಶಾಲೆ ದತ್ತು…!
ಶೈಕ್ಷಣಿಕ ದತ್ತು ಕಾರ್ಯಕ್ರಮದಡಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಅಂಕೋಲಾ ತಾಲೂಕಿನ ಅಗಸೂರು ಕೆ.ಪಿ.ಎಸ್ ಶಾಲೆಯನ್ನು ದತ್ತು ಪಡೆದಿದ್ದಾರೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರವಾರ ತಾಲೂಕಿನ ಶಿರವಾಡ ಗ್ರಾಮದ ಕೆಪಿಎಸ್ ಶಾಲೆ ದತ್ತು ಪಡೆದರೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಾರವಾರದ ಕೆಜಿಎಸ್ ಶಾಲೆಯನ್ನ ದತ್ತು ಪಡೆದಿದ್ದಾರೆ.
ಇನ್ನು ಅಪರ ಜಿಲ್ಲಾಧಿಕಾರಿ ಕಾರವಾರದ ಸರ್ಕಾರಿ ಪ್ರೌಢಶಾಲೆ ದತ್ತು ಪಡೆದರೆ, ಜಿಲ್ಲಾ ಪಂಚಾಯತ ಆಡಳಿತ ವಿಭಾಗದ ಉಪಕಾರ್ಯದರ್ಶಿ ಅಂಕೋಲಾದ ಜೋಗಳ್ಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಿಲ್ಲಾ ಪಂಚಾಯತ್ ಅಭಿವೃದ್ದಿಯ ಉಪಕಾರ್ಯದರ್ಶಿ ಕುಮಟಾ ತಾಲೂಕಿನ ಗುಂಡಬಾಳದ ಉರ್ದುಶಾಲೆ, ಸೇರಿದಂತೆ ಒಟ್ಟು 33 ಅಧಿಕಾರಿಗಳು ಶಾಲೆಗಳನ್ನು ದತ್ತು ಪಡೆದಿದ್ದಾರೆ.

300x250 AD

ಕಾಟಾಚಾರದ ಯೋಜನೆಯಾಗದಿರಲಿ
ಶೈಕ್ಷಣಿಕ ದತ್ತು ಯೋಜನೆ ಸರ್ಕಾರದ ಆದೇಶದಂತೆ ಅಧಿಕಾರಿಗಳು ಶಾಲೆಗಳನ್ನ ದತ್ತು ಪಡೆದಿದ್ದಾರೆ. ಒಳ್ಳೆಯ ಉದ್ದೇಶದಿಂದ ಸರ್ಕಾರ ಶಾಲೆಗಳ ಅಭಿವೃದ್ದಿ ನಿಟ್ಟಿನಲ್ಲಿ ಯೋಜನೆ ಜಾರಿಗೆ ತಂದಿದ್ದು ಕಾಟಾಚಾರದ ಯೋಜನೆಯಾಗದಿರಲಿ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಅಧಿಕಾರಿಗಳು ಸರ್ಕಾರದ ಆದೇಶದಂತೆ ದತ್ತು ಪಡೆದು ನಂತರ ಸುಮ್ಮನೇ ಮರೆತು ಬಿಟ್ಟರೇ ಯಾವ ಉಪಯೋಗ ಇಲ್ಲದಂತಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಬೇಕು ಎನ್ನುವ ಆದೇಶವನ್ನ ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

Share This
300x250 AD
300x250 AD
300x250 AD
Back to top