ಕಾರವಾರ: ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸಮಸ್ಯೆ, ಭದ್ರತೆ ವ್ಯವಸ್ಥೆ ಹಾಗೂ ಹಕ್ಕುಪತ್ರ ವಿತರಣೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಇಟ್ಟು ಪರಿಶೀಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅರಣ್ಯ ಹಕ್ಕು ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅಧಿಕಾರಿಗಳು ಯಾವ ಕಾರಣಕ್ಕೂ 69905 ಜಿಪಿಎಸ್ ಆಗಿರುವ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡದಂತೆ ಸೂಚಿಸಿದರು ಮತ್ತು 16993 ಪ್ರಕರಣಗಳಲ್ಲಿ ದಾಖಲೆ ಪರಿಶೀಲನೆ ಮಾಡಬಹುದಾಗಿದೆ, ಗ್ರಾಮಸಭೆ ಅರಣ್ಯ ಹಕ್ಕು ಸಮಿತಿ ಸಭೆ ಮಾಡಲು ಅವಕಾಶವಿದೆ ಎಂದರು. ರಸ್ತೆಗಳಿಗೆ ಸಂಬಂಧಿಸಿದಂತೆ, ಈಗಿರುವ ರಸ್ತೆಗಳನ್ನು ದುರಸ್ತಿ ಮಾಡಲು ಡಿಎಫ್‌ಒ ಮಟ್ಟದಲ್ಲಿ, ಎಸಿಎಫ್ ಮಟ್ಟದಲ್ಲಿ ಹೊಸದಾಗಿ ಮರಗಳನ್ನು ಕಡಿಯದೆ ಇರೋ ರಸ್ತೆಯನ್ನು ಅಭಿವೃದ್ಧಿಪಡಿಸಲು ಅನುಮತಿ ನೀಡಲಾಗುವುದು ಎಂದರು.
ಪಶ್ಚಿಮ ಘಟ್ಟ ರಕ್ಷಣಾ ಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಅರಣ್ಯ ಸಮಿತಿಗಳು ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಬೇಕು. ಜಿಪಿಎಸ್ ಮಾಡಿಕೊಂಡ ಪ್ರದೇಶ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಈಗಲೂ ತೊಂದರೆ ನೀಡುತ್ತಿದ್ದು, ಅದು ಮುಂದುವರೆಯಬಾರದು ಎಂದರು. ವನ್ಯಜೀವಿ ಪ್ರದೇಶದಲ್ಲಿ ಮರಗಳನ್ನು ಕಡಿಯದೆ ಈಗಿರುವ ರಸ್ತೆಗಳನ್ನು ದುರಸ್ಥಿ ಮಾಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ., ಡಿಎಫ್‌ಒ ಪ್ರಶಾಂತ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಹಾಗೂ ಸಿಬ್ಬಂದಿ ಇದ್ದರು.