ಕುಮಟಾ: ಯವಕ- ಯುವತಿಯರಿಗೆ ಉಚಿತ ಬ್ಯಾಕಿಂಗ್ ತರಬೇತಿ ನೀಡಿ ಅವರು ಉದ್ಯೋಗ ಪಡೆಯಲು ನೆರವಾದ ನಿವೃತ್ತ ಬ್ಯಾಂಕ್ ಅಧಿಕಾರಿ ಶಿರಸಿ ಮೂಲದ ಆರ್.ಕೆ.ಬಾಲಚಂದ್ರ ಅವರಿಗೆ `ವಿಸ್ತಾರ ಕಾಯಕ ಯೋಗಿ’ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಶಿರಸಿ ಮೂಲದ ಆರ್.ಕೆ.ಬಾಲಚಂದ್ರ ಅವರಿಗೆ `ವಿಸ್ತಾರ ಕಾಯಕ ಯೋಗಿ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಡಿಕೇರಿ ಜಿಲ್ಲೆಯ ಜಿಲ್ಲಾ ಅಗ್ರಣಿ ಬ್ಯಾಂಕ್ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಆರ್.ಕೆ. ಬಾಲಚಂದ್ರ ಅವರು ತಮ್ಮ ಸೇವೆಯುದ್ದಕ್ಕೂ ರಜಾ ದಿನ ಹಾಗೂ ಬಿಡುವಿನ ವೇಳೆಯನ್ನು ವಿದ್ಯಾರ್ಥಿಗಳಿಗೆ, ಬ್ಯಾಂಕಿಂಗ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ತರಬೇತಿ ನೀಡುತ್ತಿದ್ದರು. ಕುಮಟಾದ ಡಾ.ಎ.ವಿ.ಬಾಳಿಗಾ ಕಲಾ-ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಸುಮಾರು ಹತ್ತು ವರ್ಷಗಳ ಕಾಲ ಬ್ಯಾಂಕಿಂಗ್ ಹಾಗೂ ಸ್ಪರ್ಧತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿದ್ದಾರೆ. ರಾಜ್ಯದ ಅನೇಕ ಪತ್ರಿಕೆಗಳಿಗೆ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದಾರೆ.
ಪ್ರಶಸ್ತಿ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಆರ್.ಕೆ.ಬಾಲಚಂದ್ರ, `ಬ್ಯಾಂಕಿಗೆ ಪರೀಕ್ಷೆಗೆ ತಯಾರಿ ಬಗ್ಗೆ 1985ರಿಂದಲೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬಂದಿದ್ದೇನೆ. ಇಲ್ಲಿಯವರೆಗೆ ಸರ್ಕಾರಿ, ಆರೆ ಸರ್ಕಾರಿ ಹಾಗೂ ಬ್ಯಾಂಕಿಂಗ್ ಪರೀಕ್ಷೆ ತಯಾರಿ ನಡೆಸುವ 4.5 ಲಕ್ಷ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದರೆ. ಅವರಲ್ಲಿ ಸಾವಿರಾರು ಜನರು ಉದ್ಯೋಗ ಪಡೆದುಕೊಂಡಿದ್ದಾರೆ. ಜಿಲ್ಲೆಯಿಂದ ವಿಸ್ತಾರ ಕಾಯಕ ಯೋಗಿ ಪ್ರಶಸ್ತಿ ಪಡೆದಿರುವುದು ಅತ್ಯಂತ ಹೆಮ್ಮೆಯ ಸಂಗತಿ’ ಎಂದರು.
ಈ ಸನ್ಮಾನದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಹಾಗೂ ವಿಸ್ತಾರ ಮೀಡಿಯಾ ಮುಖ್ಯಸ್ಥರಾದ ಹರಿಪ್ರಸಾದ್ ಕೋಣೆಮನೆ ಇದ್ದರು.