ಅಂಕೋಲಾ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಸ್ತಾರ ಸುದ್ದಿ ವಾಹಿನಿಗೆ ಚಾಲನೆ ನೀಡುವ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮವನ್ನು ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಪರಿಸರವನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ. ನಾನೂ ಸಹ ಸಾವಿರಾರು ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ್ದು, ಎಲ್ಲರೂ ಸಹ ಗಿಡಗಳನ್ನು ನೆಡಿ. ನೂತನ ಮಾಧ್ಯಮವಾಗಿ ಚಾಲನೆ ಪಡೆದುಕೊಂಡಿರುವ ವಿಸ್ತಾರ ನ್ಯೂಸ್‌ಗೆ ಶುಭವಾಗಲಿ ಎಂದು ತುಂಬು ಮನಸ್ಸಿನಿಂದ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಮಾಜಿ ಶಾಸಕ ಸತೀಶ್ ಸೈಲ್ ಮಾತನಾಡಿ, ನಮ್ಮ ಜಿಲ್ಲೆಯವರೇ ಆದ ಹರಿಪ್ರಕಾಶ್ ಕೋಣೆಮನೆ ಅವರು ಜವಾಬ್ದಾರಿ ವಹಿಸಿಕೊಂಡು ನೂತನ ಚಾನೆಲ್ ಆರಂಭಿಸಿದ್ದು ಅದು ಮುಂದಿನ ದಿನಗಳಲ್ಲಿ ವಿಸ್ತಾರವಾಗಿ ಬೆಳೆಯಲಿ. ಈಗಾಗಲೇ ವೆಬ್‌ಸೈಟ್, ಫೇಸ್ಬುಕ್, ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ವಿಚಾರಗಳನ್ನ ಇಟ್ಟುಕೊಂಡು ಜನರ ಮುಂದೆ ಬಂದಿದ್ದಾರೆ. ಜಿಲ್ಲೆಯ ಪ್ರತಿಯೊಬ್ಬರನ್ನೂ ತಲುಪಬೇಕು ಎನ್ನುವ ಉದ್ದೇಶದಿಂದ ಪ್ರತಿ ತಾಲ್ಲೂಕುಗಳಲ್ಲೂ ಕಾರ್ಯಕ್ರಮವನ್ನ ಮಾಡುವ ಮೂಲಕ ಜನರೊಂದಿಗೆ ಸಂಭ್ರಮ ಹಂಚಿಕೊಳ್ಳಲು ಮುಂದಾಗಿರುವುದು ಸಂತಸದ ವಿಷಯ ಎಂದು ವಿಸ್ತಾರ ನ್ಯೂಸ್‌ನ ಧ್ಯೇಯೋದ್ದೇಶಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ವಿಸ್ತಾರ ಜಿಲ್ಲಾ ವರದಿಗಾರ ಸಂದೀಪ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಸ್ತಾರ ನ್ಯೂಸ್‌ನ ಅರೆಕಾಲಿಕ ವರದಿಗಾರ ಅರುಣ್ ಶೆಟ್ಟಿ ನಿರೂಪಣೆ ಮಾಡಿ ಗಣ್ಯರನ್ನು ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಶ್ರೀಗಂಧದ ಗಿಡಗಳನ್ನ ನೀಡುವ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.
ವಿಸ್ತಾರ್ ನ್ಯೂಸ್’ಗೆ ಶುಭ ಕೋರಿದ ವೃಕ್ಷಮಾತೆ ತುಳಸಿ ಗೌಡ
