ಕಾರವಾರ: ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರನ್ನು ಸಮಾನ ಮನಸ್ಕ ಸಂಘಟನೆಗಳ ಪದಾಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿಕೊಂಡರು. ಜನಶಕ್ತಿ ವೇದಿಕೆ, ತಾಲೂಕು ಗುತ್ತಿಗೆದಾರರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎನ್.ವಿಷ್ಣುವರ್ಧನ್ ಅವರನ್ನು ಭೇಟಿಯಾದರು.
ಈ ವೇಳೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ಸೂಕ್ಷ್ಮ ಜಿಲ್ಲೆ ಎಂದು ಗುರುತಿಸಿಕೊಂಡಿರುವ ಉತ್ತರ ಕನ್ನಡಕ್ಕೆ ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಬೇಕೆಂಬ ಕೂಗು ಮೊದಲಿನಿಂದಲೂ ಇದೆ. ಹಾಗಂತ ಇಲ್ಲಿಗೆ ಬಂದು ಹೋದವರಲ್ಲಿ ಅನೇಕರು ದಕ್ಷ ಅಧಿಕಾರಿಗಳೂ ಇದ್ದಾರೆ. ಆದರೆ ಅಂಥವರು ಇಲ್ಲಿ ಹೆಚ್ಚು ಕಾಲ ಉಳಿದಿಲ್ಲ. ಸೌಮ್ಯೇಂದು ಮುಖರ್ಜಿ, ಈಗ ವರ್ಗಾವಣೆಗೊಂಡ ಡಾ.ಸುಮನ ಪೆನ್ನೇಕರ್‌ನಂಥವರು ಇಲ್ಲಿ ಜನರ ನೆನಪಿನಲ್ಲುಳಿಯುವಂತೆ ಕರ್ತವ್ಯ ನಿರ್ವಹಿಸಿ ಹೋಗಿದ್ದಾರೆ ಎಂದು ಸ್ಮರಿಸಿದರು.
ಡಾ.ಪೆನ್ನೇಕರ್ ಅವರು ಓಸಿ, ಮಟಕಾ, ಗಾಂಜಾ ಸೇರಿದಂತೆ ಸಾಕಷ್ಟು ಅಕ್ರಮಗಳ ವಿರದ್ಧ ಶಕ್ತಿ ಮೀರಿ ಪ್ರಯತ್ನ ನಡೆಸಿ ಕಡಿವಾಣ ಹಾಕಿದ್ದರು ಹಾಗೂ ಅವರ ಕಾರ್ಯಾಚರಣೆ ಮುಂದುವರಿಯುತ್ತಿರುವಾಗಲೇ ವರ್ಗಾವಣೆ ಆದರು. ಅದಕ್ಕೆ ಬೇರೆ ಬೇರೆ ಕಾರಣಗಳೂ ಇವೆ. ಅವರ ವರ್ಗಾವಣೆ ವಿರೋಧಿಸಿ ಡಿಜಿಪಿಯವರೆಗೂ ನಾನು ಹೋಗಿ ಮನವಿ ಕೊಟ್ಟು ಬಂದಿದ್ದೆ. ಆದರೆ ಅದು ಅವರ ಕೈನಲ್ಲಿ ಏನೂ ಇಲ್ಲ, ಮುಖ್ಯ ಕಾರ್ಯದರ್ಶಿ ಕೈನಲ್ಲಿ ಇರುವುದೆಂದು ಅರಿತು ನಾವು ಮುಂದೆ ಹೋಗಿಲ್ಲ. ಅನೇಕರು ಅವರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ ಸಹ ಮಾಡಿದ್ದರು. ಅವರು ಹೋದ ಕೊರಗನ್ನು ತಾವು ನಿವಾರಣೆ ಮಾಡಬೇಕು. ತಾವು ನಿರ್ಗಮನ ಹೊಂದುವ ಸಂದರ್ಭ ಇನ್ನಷ್ಟು ದಿನ ನೀವಿಲ್ಲಿರಬೇಕು ಎಂಬ ಬೇಡಿಕೆಗಳು ಜನರಿಂದ ಬರುವಂತೆ ಕೆಲಸ ಮಾಡುತ್ತೀರ ಎಂಬ ವಿಶ್ವಾಸವಿದೆ ಎಂದರು.
ಈ ವೇಳೆ ಎಸ್ಪಿ ವಿಷ್ಣುವರ್ಧನ್ ಪ್ರತಿಕ್ರಿಯಿಸಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭದ್ರಿನಾಥ್ ನೇತೃತ್ವದ ಜಿಲ್ಲೆಯ ಅಧಿಕಾರಿಗಳ ತಂಡ ಚೆನ್ನಾಗಿದೆ. ಸೋಮವಾರವಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಇಂದು ಅಥವಾ ನಾಳೆ ಅಧಿಕಾರಿಗಳ ಸಭೆ ನಡೆಸುತ್ತೇನೆ. ಕೇವಲ ಡಾ.ಪೆನ್ನೇಕರ್ ಅವರಷ್ಟೇ ಅಲ್ಲ, ಅವರ ಹಿಂದೆಲ್ಲ ಯಾರು ಒಳ್ಳೆ ಕೆಲಸಗಳನ್ನ ಪ್ರಾರಂಭಿಸಿದ್ದರೋ ಅದ್ಯಾವುದೂ ನಿಲ್ಲಬಾರದೆಂಬುದು ನನ್ನ ಉದ್ದೇಶ. ಅದರ ಜೊತೆಗೆ ಇನ್ನೂ ಸ್ವಲ್ಪ ಒಳ್ಳೆ ಕೆಲಸಗಳನ್ನ ಮಾಡಲು ಪ್ರಯತ್ನಿಸುತ್ತೇವೆ. ತಮ್ಮ ಸಹಕಾರ ಪೊಲೀಸ್ ಇಲಾಖೆಗೆ ಇರಲಿ ಎಂದು ಹೇಳಿದರು.
ಈ ವೇಳೆ ಜನಶಕ್ತಿ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ರಾಮ ನಾಯ್ಕ, ಬಾಬು ಶೇಖ್, ಸುರೇಶ್ ನಾಯ್ಕ, ಕಾಶೀನಾಥ ನಾಯ್ಕ, ಸಿ.ಎನ್.ನಾಯ್ಕ, ಸೂರಜ್ ಕುರೂಮಕರ್, ಅಲ್ತಾಫ್ ಶೇಖ್, ರಾಜೀವ್ ನಾಯ್ಕ, ರಾಜೇಶ್ ಶೇಟ್, ದೀಪಕ್ ನಾಯ್ಕ, ದೊರೆಸ್ವಾಮಿ, ರೂಪೇರ್ಶ ನಾಯ್ಕ, ಪರಮಾನಂದ ನಾಯ್ಕ ಮುಂತಾದವರಿದ್ದರು.
ನೂತನ ಎಸ್ಪಿಯನ್ನು ಸ್ವಾಗತಿಸಿದ ಸಮಾನ ಮನಸ್ಕ ಸಂಘಟನೆಗಳು
