ಹೊನ್ನಾವರ: ದಶಕಗಳಿಂದ ಜಿಲ್ಲೆಯು ಅಭಿವೃದ್ಧಿಯತ್ತ ಸಾಗುತ್ತಿದ್ದು, ಈ ಭಾಗದವರು ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಪಟ್ಟಣದಲ್ಲಿ ಶನಿವಾರ ನಡೆದ ಜಿಲ್ಲಾ ನಾಮಧಾರಿ ಅಭಿವೃದ್ಧಿ ಸಂಘದ ನೂತನ ನಾಮಧಾರಿ ವಿದ್ಯಾರ್ಥಿ ನಿಲಯ ಹಾಗೂ ಸಭಾಭವನ ಉದ್ಘಾಟಿಸಿ ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಒಂದು ಕಾಲದಲ್ಲಿ ಬಡಸಮಾಜ ಎಂದು ಗುರುತಿಸಲ್ಪಡುತ್ತಿದ್ದ ಹಿಂದುಳಿದ ನಾಮಧಾರಿ ಸಮಾಜ ಈಗ ಹಿಂದಿಯ ‘ಬಡಾ’ ಸಮಾಜವಾಗಿದೆ. ಹಲವು ಸಂಕಷ್ಟದ ನಡುವೆಯು ಕೃಷಿ, ಶಿಕ್ಷಣ ಕ್ಷೇತ್ರದಲ್ಲಿ ಈ ಸಮಾಜದವರು ಸಾಧನೆ ಮಾಡಿದ್ದಾರೆ. ಇತರೆ ಎಲ್ಲಾ ರಂಗಕ್ಕಿಂತ ಶಿಕ್ಷಣ ಕ್ಷೇತ್ರಕ್ಕೆ ಬಂಡವಾಳ ಹಾಕಿದರೆ ಸಮಾಜ ಸುಶಿಕ್ಷಿತರ ಸಂಖ್ಯೆ ಹೆಚ್ಚಲಿದೆ. ಅದಕ್ಕೆ ತಾಲೂಕಿನ ಕಾಲೇಜಿಗೆ ಈ ಹಿಂದೆ ನೀಡಿದ ಅನುದಾನದಿಂದ ಉತ್ತಮ ಸೌಕರ್ಯದ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಜ್ಞಾನಜ್ಞನೆ ಲಭಿಸಿದೆ ಎಂದರು.
ಧರ್ಮಸ್ಥಳ ಯೋಜನೆಯಿಂದ 1600 ಕೋಟಿ ರೂ. ಪ್ರಯೋಜನ ಪಡೆದ ಜಿಲ್ಲೆಯಲ್ಲಿ ಒಂದು ರೂಪಾಯಿಯೂ ಕಟ್ಟಬಾಕಿ ಇಲ್ಲದಿರುವುದು ಅಭಿನಂದನೀಯ. ಜಿಲ್ಲೆಯ ಮೂಲಕ ಹಾಯ್ದು ಹೋಗುವಾಗ ಜಿಲ್ಲೆಯ ಅಭಿವೃದ್ಧಿಯನ್ನು ಗಮನಿಸುತ್ತ ಬಂದಿದ್ದೇನೆ. ಮೊದಲಕ್ಕಿಂತ ಸಮಾಜ ಪ್ರಗತಿ ಸಾಧಿಸಿದ್ದು ಸಂತೋಷದ ಸಂಗತಿ. ಏನಿದ್ದರೂ ಶಿಕ್ಷಣವೇ ಶ್ರೇಷ್ಠ. ಎಲ್ಲ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸುತ್ತಿದ್ದೀರಿ. ಇದೆಲ್ಲಕ್ಕಿಂತ ಶಿಕ್ಷಣಕ್ಕೆ ತೊಡಗಿಸುವ ಬಂಡವಾಳ ಕುಟುಂಬವನ್ನು ಮತ್ತು ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂದರು.
ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೋಜನ ಶಾಲೆ ಉದ್ಘಾಟಿಸಿ ಮಾತನಾಡಿ, ಸಮಾಜದ ಪ್ರತಿಯೋರ್ವರು ಅವರ ಕರ್ತವ್ಯ ಪಾಲಿಸಿದರೆ ಸಂಘಟನೆ ಉತ್ತಮವಾಗಲಿದೆ ಎನ್ನುವುದಕ್ಕೆ ಇಂದಿನ ಕಾರ್ಯವೇ ಸಾಕ್ಷಿಯಾಗಿದೆ. ಭಗವಂತನ ಬೆಳಕು ಬಿದ್ದಲ್ಲಿ ಭಾಗ್ಯೋದಯವಾಗುತ್ತದೆ. ಸಣ್ಣಪುಟ್ಟ ಪ್ರವಾಹಗಳು ಸೇರಿ ನದಿಯಾದಂತೆ ಸಣ್ಣಪುಟ್ಟ ಸಮಾಜಗಳು ಸೇರಿ ಬಲಿಷ್ಠ ಸಮಾಜವೆಂಬ ನದಿಯಾಗಬೇಕು. ನದಿಗಳು ಸಮುದ್ರ ಸೇರಿ ಬಲಿಷ್ಠವಾಗುವಂತೆ ದೇಶ ಬಲಿಷ್ಠವಾಗಬೇಕು ಎಂದರು.
ಜನರು ಪರಸ್ಪರ ದ್ವೇಷ, ಮತ್ಸರ, ಸಂಶಯದಿಂದ ಕಾಣದೆ ಕರ್ತವ್ಯ ಮಾಡುತ್ತ ಮುಂದೆ ಹೋಗಬೇಕು. ಸಾಮಾಜಿಕರ ನೇತೃತ್ವದಲ್ಲಿ ಸಮಾಜ ಬೆಳೆಯಬೇಕು. ಪರಸ್ಪರ ಹೊಂದಿಕೊಡು ನದಿಗಳು ಐಕ್ಯವಾಗುವಂತೆ ಎಲ್ಲರೂ ಹೊಂದಿಕೊಡು ಧರ್ಮದಲ್ಲಿ ಐಕ್ಯವಾಗಬೇಕು. ಆ ಪಕ್ಷ ಈ ಪಕ್ಷ ಎಂಬ ವೈರಸ್ ಬೇಡ. ರಾಷ್ಟ್ರೀಯತೆಯ ದಿಕ್ಕಿನಲ್ಲಿ ಮುಂದುವರೆದು ಬಲಿಷ್ಠ ಸನಾತನ ಧರ್ಮ ಕಟ್ಟಬೇಕು. ರಾಜಕಾರಣ ಬೇಕು. ಆದರೆ ಅದು ಮಾಡೆಲ್ ಆಗಬಾರದು. ಆರೋಗ್ಯವಂತ ವ್ಯಕ್ತಿ ಎಲ್ಲ ಸಮಾಜದ ಅಭಿವೃದ್ಧಿ ಮಾಡಬೇಕು. ಸಂಪತ್ತು, ಹಣ ಮಾಡಲು ರಾಜಕೀಯ ಅಲ್ಲ. ಹಣ ಇಲ್ಲದೆಯೂ ರಾಜಕೀಯ ಮಾಡಬಹುದು. ಅದಕ್ಕೆ ಈ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರೇ ಉದಾಹರಣೆ. ಅಂತಹ ವ್ಯಕ್ತಿಗಳಾಗಿ ಎಂದು ರಾಜಕಾರಣಿಗಳಿಗೆ ಕಿವಿಮಾತು ಹೇಳಿದರು.
ಹದಿನೈದು ಸಾವಿರಕ್ಕೂ ಹೆಚ್ಚು ಜನ ಸೇರಿದ ಸಭೆ ಇಬ್ಬರು ಧಾರ್ಮಿಕ ದಿಗ್ಗಜರಿಂದಾಗಿ ಧರ್ಮಸಭೆಯಾಗಿ ಸಮಾಜಕ್ಕೆ ಮಾರ್ಗದರ್ಶಕವಾಗಿತ್ತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಹವನ, ಶ್ರೀಸತ್ಯನಾರಾಯಣ ವ್ರತ ಪೂಜಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಿತು. ಮಾರುತಿ ನಾಯ್ಕ ಸಂಗಡಿಗರಿಂದ ಭಜನೆ, ಅನ್ವಿತಾ ನಾಯ್ಕ ಇವರಿಂದ ಭರತನಾಟ್ಯ, ಸುಚಿತ್ರಾ ನಾಯ್ಕ ನಾಥಗೇರಿ ಇವರಿಂದ ಯೋಗ ಕಾರ್ಯಕ್ರಮ ಜರುಗಿತು. ನಂತರ ಸಂಜೆ 5 ಗಂಟೆಯಿಂದ ವಿವಿಧ ಕಲಾವಿದರ ಕೂಡುವಿಕೆಯಲ್ಲಿ ‘ರಾಣಿ ಶಶಿಪ್ರಭಾ’, ‘ಜಾಂಬವತಿ ಕಲ್ಯಾಣ’, ‘ರಾಮಾಂಜನೇಯ’ ಯಕ್ಷಗಾನ ಜರುಗಿತು.