ಹೊನ್ನಾವರ: ಹೊಸ ತಲೆಮಾರಿನವರಿಗೆ ಆಸಕ್ತಿ ಹಾಗೂ ಆಸೆ ಇದೆ. ಆದರೆ ಹೊಸ ತಲೆಮಾರು ಮುಂದೆ ಬರಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ನಾಮಧಾರಿ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿ, ಸಮಾಜದ ಕಟ್ಟ ಕಡೆಯವರಿಗೂ ಬದುಕಲಿಕ್ಕೆ ಬೇಕಾದಂಥ ಯೋಜನೆಯನ್ನು ರೂಪಿಸುವಂತ ಅವಕಾಶಗಳು ನಮ್ಮ ಸಮಾಜದಲ್ಲಿ ಬರಬೇಕು ಎನ್ನುವಂಥ ಕನಸುಗಳನ್ನು ಹೊತ್ತು ಅನೇಕ ನಮ್ಮ ಸಮಾಜದ ಸಂಘಟನೆಗಳು ಕೆಲಸ ಮಾಡುತ್ತಿವೆ. ಅದರ ಒಂದು ಭಾಗವಾಗಿ ಜಿಲ್ಲಾ ನಾಮಧಾರಿ ಅಭಿವೃದ್ಧಿ ಸಂಘ ಇಂದು ಕ್ರಾಂತಿಕಾರಿ ಕೆಲಸಗಳನ್ನು ಮಾಡಿದೆ. ಕೋಟ್ಯಂತರ ರೂಪಾಯಿಯಲ್ಲಿ ನಾಮಧಾರಿ ಸಭಾಭವನವನ್ನು ಮತ್ತು ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿದ ಈ ದಿನ ಸುವರ್ಣಾಕ್ಷರದಿಂದ ಬರೆದಿಡುವಂತಹ ದಿನ. ಸಮಾಜದ ಅಭಿವೃದ್ಧಿಗಾಗಿ ನಾರಾಯಣಗುರು ವಸತಿ ಶಾಲೆ ರಾಜ್ಯದಲ್ಲಿ ನಾಲ್ಕು ಕಡೆ ಆರಂಭವಾಗಿದೆ ಎಂದರು.
26 ಉಪ ಪಂಗಡಗಳನ್ನು ಹೊಂದಿರುವ, ರಾಜ್ಯದಲ್ಲಿ ಕುಲ ಕಸುಬನ್ನು ಕಳೆದುಕೊಂಡಿರುವಂಥ ಒಂದೇ ಒಂದು ಜಾತಿ ಎಂದರೆ ಅದು ಈಡಿಗ- ಬಿಲ್ಲವರು. ಈ ಕೊರಗು ಮತ್ತು ಆತಂಕಗಳ ನಡುವೆ ಈ ಸಮಾಜವನ್ನು ಕಟ್ಟುವಂತಹ ಅನೇಕ ಕ್ಷಣಗಳು ನಿರಂತರವಾಗಿ ನಡೆಯುತ್ತಿದೆ. ಸಮಾಜಕ್ಕೆ ಶಕ್ತಿ ಕೊಡಲು, ರಾಜಕಾರಣವಾಗಿ, ಸಾರ್ವಜನಿಕವಾಗಿ, ಶೈಕ್ಷಣಿಕವಾಗಿ ನಮ್ಮ ಸಮಾಜದಲ್ಲಿದ್ದಾರೆ ಎಂದರು.
ಲಿಫ್ಟ್ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಧರ್ಮಸ್ಥಳದ ಎರಡು ಮಹಾಪುರಷರ ಅಮೃತಹಸ್ತದಿಂದ ಚಾಲನೆ ದೊರೆತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ನಾಮಧಾರಿಗಳ ಶಕ್ತಿ ಪ್ರದರ್ಶನವಾದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ಇತರೆ ಎಲ್ಲಾ ಸಮಾಜಕ್ಕೂ ಮಾದರಿಯಾಗಿದೆ. ಸುಸಜ್ಜಿತವಾದ ಸಮುದಾಯ ಭವನ ವಿದ್ಯಾರ್ಥಿ ನಿಲಯದ ಸೌಕರ್ಯ ಹೊಂದಿದ್ದು, ಇತರೆ ಎಲ್ಲಾ ಸಮಾಜಕ್ಕೂ ಇದರಿಂದ ಅನೂಕೂಲವಾಗಲಿದೆ ಎಂದರು.
ಶಾಸಕ ಸುನೀಲ ನಾಯ್ಕ ದಿ.ವಿ.ಜಿನಾಯ್ಕ ವೇದಿಕೆ ಹಾಗೂ ಸಭಾಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿ, ಸ್ವಾಭಿಮಾನದ ಸಂಕೇತವಾದ ಈ ಸಭಾಭವನ ಸಮಾಜದ ಹಿರಿಯರ ಒಗ್ಗಟ್ಟಿನ ಪ್ರತೀಕವಾಗಿದೆ. ಹಿರಿಯರು ಮತ್ತು ಕಿರಿಯರ ಸಹಕಾರದಿಂದ ಇಂದು ಲೋಕಾರ್ಪಣೆಗೊಂಡಿದೆ. ಈ ಅವಧಿಯಲ್ಲಿ ನಾನು ಶಾಸಕನಾಗಿರುದು ನನ್ನ ಸುಯೋಗವಾಗಿದೆ. ಚಿಕ್ಕ ವಯಸ್ಸಿನಲ್ಲಿ ಶಾಸಕ ಸ್ಥಾನ ನೀಡುವ ಮೂಲಕ ಗುರುತರ ಜವಾಬ್ದಾರಿ ನೀಡಿರುದರಿಂದ ಋಣ ತೀರಿಸುವ ಸುಯೋಗ ಬಂದಿದೆ ಎಂದರು.
ಮಾಜಿ ಸಚಿವ ಹಾಗೂ ಜಿಲ್ಲಾ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಎನ್.ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ಜೆ.ಡಿ.ನಾಯ್ಕ, ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಎಂ.ಜಿ.ನಾಯ್ಕ, ಮಾಜಿ ಜಿಪಂ ಸದಸ್ಯರಾದ ದೀಪಕ ನಾಯ್ಕ, ಪುಷ್ಪಾ ನಾಯ್ಕ, ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಸುಧೀಶ ನಾಯ್ಕ, ಪ.ಪಂ ಮಾಜಿ ಅಧ್ಯಕ್ಷ ಶಿವರಾಜ ಮೇಸ್ತ, ನಿವೃತ್ತ ಎಸ್.ಪಿ ಎಂ.ಟಿ.ನಾಯ್ಕ, ಪ್ರಾಂಶುಪಾಲೆ ಡಾ.ವಿಜಯಲಕ್ಷ್ಮಿ ನಾಯ್ಕ, ರಾಜೀವ್ ಮೆ.ಎನ್, ರಮೇಶ ನಾಯಕ, ಸುಚಿತ್ರಾ ನಾಯಕ, ಎಂ.ಆರ್.ನಾಯ್ಕ, ವಿ.ಜಿ.ನಾಯ್ಕ, ಚಂದ್ರಶೇಖರ ಗೌಡ, ಸಿ.ಬಿ.ನಾಯ್ಕ, ಎಂ.ಪಿ.ನಾಯ್ಕ, ಎಸ್.ಟಿ.ನಾಯ್ಕ ಇತರರು ಉಪಸ್ಥಿತರಿದ್ದರು.
ಸಂಗೀತಾ ನಾಯ್ಕ ಪ್ರಾರ್ಥಿಸಿದರು, ಕಾರ್ಯದರ್ಶಿ ಎನ್.ಕೆ.ನಾಯ್ಕ ಸ್ವಾಗತಿಸಿ, ಕಟ್ಟಡ ಸಮಿತಿ ಉಪಾಧ್ಯಕ್ಷ ರಾಮಪ್ಪ ನಾಯ್ಕ ವಂದಿಸಿದರು. ಸುಧೀಶ ನಾಯ್ಕ ಮತ್ತು ಪ್ರಕಾಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.