ಶಿರಸಿ: ಕೊಳಗಿಬೀಸ್ ಮಾರುತಿ ದೇವಸ್ಥಾನದ ಪ್ರಧಾನ ಅರ್ಚಕ ವಿ. ಕುಮಾರ ಭಟ್ಟ ನವೆಂಬರ್ 8ರಂದು ನಡೆಯಲಿರುವ ಚಂದ್ರ ಗ್ರಹಣದ ಹಿನ್ನಲೆಯಲ್ಲಿ ಅದರ ಆಚರಣೆ ವಿಧಾನದ ಕುರಿತು ಮಾಹಿತಿ ನೀಡಿದ್ದಾರೆ.
ಅಂದು ಸಂಜೆ 5.58 ರಿಂದ 6.19ರ ವರೆಗೆ ಚಂದ್ರಗ್ರಹಣ ಆಚರಣೆಯ ಪುಣ್ಯ ಕಾಲವಿದ್ದು ಈ ವೇಳೆಯಲ್ಲಿ ಸ್ನಾನ ಮಾಡಿ ಜಪ, ತರ್ಪಣ, ದಾನ ಇತ್ಯಾದಿಗಳಿಂದ ಆಚರಿಸಬೇಕು. ಗ್ರಹಣ ಪೂರ್ವ ದೇವರನ್ನು ಜಲಶಯನ ಮಾಡಬೇಕು ಎಂದು ಸೂಚಿಸಿದ್ದಾರೆ.
ಅಂದು ಬೆಳಿಗ್ಗೆ 9-15ರ ವರೆಗೆ ಭೋಜನದಿಗಳು ಶಾಸ್ತ್ರ ಸಮ್ಮತವಾಗಿ ಮಾಡಬಹುದು. ಅಶಕ್ತರು, ರೋಗಿಗಳು, ಮಕ್ಕಳು, ವೃದ್ದರು ಮಧ್ಯಾಹ್ನ 12-15ರ ವರೆಗೆ ಆಹಾರ ಸೇವಿಸಬಹುದು.
ದೇವಸ್ಥಾನಾದಿಗಳ ದೀಪೋತ್ಸವಗಳನ್ನು ಮೊದಲನೇ ದಿನವೇ ಆಚರಿಸುವುದು, ದೇವರನ್ನು ಜಲಾಧಿವಾಸ ಮಾಡುವ ಪರಿಪಾಠವಿರುವ ಮನೆಯಲ್ಲಿ ಮಧ್ಯಾಹ್ನ ಪೂಜೆಯ ನಂತರ ಜಲಾಧಿವಾಸ ಮಾಡುವುದು. ಗ್ರಹಣ ಮೋಕ್ಷದ ನಂತರ ಶುದ್ಧಿಯಾಗಿ ಪುನಃ ಪೂಜೆ ಮಾಡುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.