ಕಾರವಾರ: ಗುಂಡಿ ಬಿದ್ದು ಹದಗೆಟ್ಟಿರುವ ಕಾರವಾರ- ಕೈಗಾ ರಾಜ್ಯ ಹೆದ್ದಾರಿಯನ್ನ ದುರಸ್ತಿಪಡಿಸುವಂತೆ ಆಗ್ರಹಿಸಿ ವಾಟಾಳ್ ಪಕ್ಷ ಹಾಗೂ ಭಗತ್ಸಿಂಗ್ ಆಟೋ ರಿಕ್ಷಾ ಯೂನಿಯನ್ನಿಂದ ಹಬ್ಬುವಾಡದ ಬಳಿ ಪ್ರತಿಭಟನೆ ನಡೆಸಲಾಯಿತು.
ಕಳೆದ ಆರು ತಿಂಗಳಿನಿಂದಲೂ ರಸ್ತೆ ದುರಸ್ತಿಗೆ ಆಗ್ರಹಿಸುತ್ತಿದ್ದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೆಲ ಕಾಲ ರಸ್ತೆ ನಡೆಸಿ ರಸ್ತೆ ತಡೆ ನಡೆಸಿದರು. ರಸ್ತೆಯಲ್ಲೇ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವಾಟಾಳ್ ಪಕ್ಷ ರಾಘು ನಾಯ್ಕ, ಹಬ್ಬುವಾಡ ರಸ್ತೆಯು ಇಲ್ಲಿನ ರೈಲ್ವೆ ನಿಲ್ದಾಣ ಹಾಗೂ ಕೈಗಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಅಲ್ಲದೇ ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಮಹಿಳೆಯರು ಪ್ರತಿನಿತ್ಯ ಅಪಘಾತಗಳಿಗೆ ತುತ್ತಾಗುತ್ತಾರೆ. ಆದರೂ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿಲ್ಲ. ಮುಂದಿನ 10 ದಿನಗಳಲ್ಲಿ ರಸ್ತೆ ಸರಿಪಡಿಸದಿದ್ದರೆ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕುತ್ತೇವೆ. ಜತೆಗೆ ಅಷ್ಟರಲ್ಲಿ ಏನಾದರು ಅಪಘಾತ ಸಂಭವಿಸಿ ಯಾರಾದರೂ ಮೃತಪಟ್ಟರೆ ಅವರ ಮೃತ ದೇಹವನ್ನು ಇಲಾಖೆಯ ಕಚೇರಿ ಮುಂದಿಟ್ಟು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಭಗತ್ಸಿಂಗ್ ಆಟೋ ರಿಕ್ಷಾ ನಿಲ್ದಾಣದ ಅಧ್ಯಕ್ಷ ರಮಕಾಂತ ಗುನಗಿ ಮಾತನಾಡಿ, ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿಯೇ ಸ್ತ್ರೀಯರು, ಗರ್ಭಿಣಿಯರು ವೃದ್ಧರು ಸೇರಿದಂತೆ ಶಾಲಾ ಮಕ್ಕಳನ್ನು ಕೂಡಾ ಆಟೋದಲ್ಲಿ ಕರೆದೊಯ್ಯುವ ಪರಿಸ್ಥಿತಿ ಇದೆ. ರಸ್ತೆಯ ಪರಿಸ್ಥಿತಿ ಗಮನಿಸಿದರೆ ಒಮ್ಮೆಮ್ಮೆ ಗರ್ಭಿಣಿ ಸ್ತ್ರೀಯರನ್ನು ಆಸ್ಪತ್ರೆಗೆ ಕರೆದೋಯ್ಯುವುದೇ ಕಷ್ಟವಾಗಿದೆ. ಇಂತಹ ರಸ್ತೆಯಲ್ಲಿ ಸಂಚಾರಿಸುವುದರಿಂದ ರಿಕ್ಷಾಗಳು ವಾರಕ್ಕೊಮ್ಮೆ ರಿಪೇರಿಗೆ ಬೀಳುತ್ತವೆ. ಹೀಗಾಗಿ ಕೂಡಲೇ ಜಿಲ್ಲಾಡಳಿತ ರಸ್ತೆಯ ದುರಸ್ತಿ ಮಾಡದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.ಆಟೋ ಚಾಲಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.