ಅಂಕೋಲಾ: ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ವಿರೋಧಿಸಿ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಲು, ರೈತರ ಭೂಮಿ- ಆಹಾರ- ಉದ್ಯೋಗದ ಹಕ್ಕುಗಳನ್ನು ರಕ್ಷಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯಿಂದ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಲಾಯಿತು.
ಕಳೆದ ನಾಲ್ಕು ವರ್ಷಗಳಲ್ಲಿ ಬಂದೆರಗಿದ ಅತಿವೃಷ್ಟಿ, ಬರಗಾಲ ಹಾಗೂ ಕೋವಿಡ್ ಲಾಕ್ಡೌನ್ ಮುಂತಾದ ಪ್ರಾಕೃತಿಕ ವಿಕೋಪಗಳ ಜೊತೆಗೆ ಎಂದಿನಂತೆ ಸರ್ಕಾರಗಳ ರೈತ ವಿರೋಧಿ ಧೋರಣೆಗಳಿಂದ ನೊಂದಿದ್ದ ರೈತ ಸಮುದಾಯ ಈ ವರ್ಷವಾದರೂ ತಮ್ಮ ಛಿದ್ರಗೊಂಡ ಬದುಕನ್ನು ಸರಿಪಡಿಸಿಕೊಳ್ಳುವ ನಿರೀಕ್ಷೆಯಲ್ಲಿತ್ತು. ಆದರೆ ಈ ವರ್ಷವೂ ಕೂಡ ರಾಜ್ಯದ ಎಲ್ಲೆಡೆ ಉಂಟಾದ ಅತಿವೃಷ್ಟಿಯಿಂದ ರೈತರ ಬದುಕು ನೀರಿನಲ್ಲಿ ಕೊಚ್ಚಿಹೋಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರತಿಯೊಬ್ಬ ರೈತರು ಬೆಳೆ ಬೆಳೆಯಲು ಹಾಕಿದ್ದ ಲಕ್ಷಾಂತರ ರೂ. ಬಂಡವಾಳ ಅತಿವೃಷ್ಟಿ ಪರಿಣಾಮದಿಂದಾಗಿ ನಷ್ಟವಾಗಿದ್ದರೂ ಈ ರೈತಾಪಿ ಸಮುದಾಯದ ಬಂಡವಾಳ ರಕ್ಷಣೆಗೆ ಯಾವುದೇ ಮಾತನಾಡದ ರಾಜ್ಯ ಬಿಜೆಪಿ ಸರ್ಕಾರ, ರೈತರ ಭೂಮಿ, ವಿದ್ಯುತ್, ನೀರು ಇತ್ಯಾದಿ ಅಮೂಲ್ಯ ಆಸ್ತಿಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆಯಲು ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆಯನ್ನು ನ.2ರಿಂದ 4ವರೆಗೆ ಬೆಂಗಳೂರಿನಲ್ಲಿ ಹೊರ ವಲಯದಲ್ಲಿ ನಡೆಸಲು ಸಿದ್ಧತೆ ನಡೆಸುತ್ತಿದೆ. ಇದೊಂದು ರೈತ ವಿರೋಧಿ ಹಾಗೂ ಜನ ವಿರೋಧಿ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.
ಇತ್ತ ಕೃಷಿಯೂ ಇಲ್ಲದೇ ಅತ್ತ ಕೈಗಾರಿಕೆಯೂ ಇಲ್ಲದೇ ಪಾಳು ಬಿದ್ದಿರುವ ಈ ಭೂಮಿಗಳಲ್ಲಿ ಯಾವುದೇ ಪರಿಣಾಮಕಾರಿ ಉದ್ಯೋಗ ಸೃಷ್ಟಿಯಾಗಿಲ್ಲ. ಕಾರ್ಪೊರೇಟ್ ಕಂಪನಿಗಳ ಭೂ ದಾಹಕ್ಕೆ ಮತ್ತು ಆಸ್ತಿ ಮೌಲ್ಯದ ಹೆಚ್ಚಳಕ್ಕೆ ಬಳಕೆಯಾಗಿವೆ. ಪರಿಸ್ಥಿತಿ ಹೀಗಿರುವಾಗ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ಸಂಘಟಿಸುತ್ತಿರುವುದು ನಿರರ್ಥಕವಾದುದ್ದು ಹಾಗೂ ಕಷ್ಟ-ನಷ್ಟದಲ್ಲಿರುವ ರೈತ ಸಮುದಾಯದ ಭೂಮಿ, ವಿದ್ಯುತ್, ನೀರು ಮುಂತಾದ ಆಸ್ತಿ-ಸಂಪತ್ತುಗಳನ್ನು ದರೋಡೆ ಮಾಡುವ ದುರುದ್ದೇಶದಿಂದ ಕೂಡಿದೆ ಎಂದು ದೂರಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ತಾಲೂಕು ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ಉಪಾಧ್ಯಕ್ಷರಾದ ರಮಾನಂದ ನಾಯಕ ಅಚವೆ, ಜಂಟಿ ಕಾರ್ಯದರ್ಶಿ ಉದಯ ನಾಯ್ಕ, ಸಮಿತಿ ಸದಸ್ಯರಾದ ಶಿವರಾಮ ಪಟಗಾರ, ರಾಜಗೋಪಾಲ ಶೇಟ್, ಶಂಕರ ವಿಷ್ಣು ಹರಿಕಂತ್ರ, ಗ್ರಾಮ ಪಂಚಾಯತ ಸದಸ್ಯ ಸಂತೋಷ ದುರ್ಗೇಕರ ಸೇರಿದಂತೆ ಇತರರು ಹಾಜರಿದ್ದರು.