ಭಟ್ಕಳ: ರಾಮರಾಜ್ಯದ ಕಲ್ಪನೆ ಸಾಕಾರಗೊಳ್ಳಲು ಗ್ರಾಮ ರಾಜ್ಯ ಬಲವರ್ಧನೆಯಾಗುವುದು ಅವಶ್ಯವಿದ್ದು, ಸ್ಥಳೀಯವಾಗಿ ಜನತೆಗೆ ಅತೀ ಹತ್ತಿರದಿಂದ ಸ್ಪಂದಿಸುವ ಅವಕಾಶವಿರುವ ಗ್ರಾಮ ಪಂಚಾಯತ ವ್ಯವಸ್ಥೆ ಸದೃಢಗೊಳ್ಳಬೇಕು ಎಂದು ಶಾಸಕ ಸುನೀಲ್ ಬಿ.ನಾಯ್ಕ ಅಭಿಪ್ರಾಯಪಟ್ಟರು.
ತಾಲೂಕ ಪಂಚಾಯತ ಸಭಾಭವನದಲ್ಲಿ ಗ್ರಾಮ ಪಂಚಾಯತ ದೂರದೃಷ್ಠಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಥಳೀಯ ಜನಪ್ರತಿನಿಧಿಗಳು ಪಂಚಾಯತರಾಜ್ ವ್ಯವಸ್ಥೆಯನ್ನು ಸಮಗ್ರವಾಗಿ ಅಧ್ಯಯನ ಮಾಡುವುದು ಅವಶ್ಯವಿದ್ದು, ತನ್ನ ಸದಸ್ಯತ್ವದ ಅವಧಿಯಲ್ಲಿ ಪರಿಣಾಮಕಾರಿ ಆಡಳಿತ ನಿರ್ವಹಿಸಲು ಸಹಾಯವಾಗುವುದರ ಜೊತೆಗೆ ಮುಂದೆ ಸುಸ್ಥಿರ ಸಮಾಜ ನಿರ್ಮಾಣಕ್ಕೂ ಸಹಾಯವಾಗುತ್ತದೆ. ಸದಸ್ಯರು ಕಾರ್ಯಗಾರ, ತರಬೇತಿ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ನೈತಿಕವಾಗಿಯೂ ಬೆಳೆಯಬಹುದು. ಈ ನಿಟ್ಟಿನಲ್ಲಿ ತಮ್ಮ ತಮ್ಮ ಗ್ರಾಮ ಪಂಚಾಯತಗಳಲ್ಲಿ ದೂರದೃಷ್ಠಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಎಂದು ಕರೆನೀಡಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಮಾಣಿಕವಾಗಿ ತೊಡಗಿಸಿಕೊಂಡಿದ್ದು, ಸರ್ವರಿಗೂ ಸೂರು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಇದನ್ನು ಕಾರ್ಯಗತಗೊಳ್ಳಲು ಅಧಿಕಾರಿ, ಸಿಬ್ಬಂದಿ ಕೈಜೋಡಿಸಬೇಕು. ಕಳೆದ ನೆರೆ ಹಾವಳಿಯ ಸಂದರ್ಭದಲ್ಲಿ ತೊಡಗಿಸಿಕೊಂಡ ಎಲ್ಲಾ ಅಧಿಕಾರಿ, ನೌಕರರ ವೃಂದದ ಕಾರ್ಯ ಶ್ಲಾಘನೀಯ ಎಂದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಚಿಕ್ಕನ್ಮನೆಯವರು ಪ್ರಾಸ್ತಾವಿಕ ಮಾತನಾಡಿದರು. ತಾ.ಪಂ. ವ್ಯವಸ್ಥಾಪಕ ಲತಾ ನಾಯ್ಕ ಸ್ವಾಗತಿಸಿದರು. ರಾಘವೇಂದ್ರ ಪೂಜಾರಿ ವಂದಿಸಿದರು. ಕರಿಯಪ್ಪ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಪ್ಪ ಮಡಿವಾಳ, ಗೀತಾ ಹೆಗಡೆ, ಹೊನ್ನಾವರ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ನಾಯ್ಕ ಇದ್ದರು.