ಅಂಕೊಲಾ: ಮೀನುಗಾರರ ಮಕ್ಕಳು ಶೈಕ್ಷಣಿಕವಾಗಿ ಉನ್ನತಿ ಸಾಧಿಸಬೇಕು. ಸಾಧಿಸಲು ಅಸಾಧ್ಯವಾದ ಅಸಹಾಯಕರಿಗೆ ಆರ್ಥಿಕವಾಗಿ ಸಹಾಯ ಸಹಕಾರ ಮಾಡಲಾಗುವುದು. ಈ ಮೂಲಕ ಸಮಾಜ ಶೈಕ್ಷಣಿಕ ಪ್ರಗತಿ ಸಾಧಿಸುವಂತಾಗಲಿ ಎಂದು ಉತ್ತರಕನ್ನಡ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ನುಡಿದರು.
ಅವರು ನ 1 ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನೂತನ ಪುನರ್‌ಸಂಘಟಿತ ಮೀನುಗಾರರ ಸಂಘಟನೆ ಅನಾವರಣಗೊಳಿಸಿ ಮೀನುಗಾರರ ರಕ್ಷಣಾ ವೇದಿಕೆ ಅಂಕೋಲಾ ಉತ್ತರಕನ್ನಡ ನಾಮಕರಣದ ಸಂಘನೆಯ ಅಡಿಯಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತಾನಾಡಿದರು.
ಮೀನುಗಾರ ಮಹಿಳೆಯರು ಆರ್ಥಿಕವಾಗಿ ಸದೃಢತೆ ಹೊಂದಲು ಮೀನು ಮಾರಾಟ ಫೆಡರೇಶನ್ ಸಾಲ ಸೌಲಭ್ಯ ನೀಡಲಾಗುತ್ತಿದ್ದು ಸಂಸ್ಥೆ ಕಳೆದ ಎರಡು ವರ್ಷದಿಂದ ಆರ್ಥಿಕ ಚೇತರಿಕೆಯನ್ನು ಕಂಡು ಲಾಭದಲ್ಲಿ ಮುನ್ನಡೆಯುತ್ತದೆ ಎಂದು ಅವರು ನುಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಂಕೋಲಾ ತಹಶೀಲ್ದಾರವರ ಅನುಪಸ್ಥಿತಿಯಲ್ಲಿ ಜಿಲ್ಲಾ ಹಾಲಕ್ಕಿ ಸಮಾಜದ ಅಧ್ಯಕ್ಷ ಹನುಮಂತ ಬಿ. ಗೌಡ ಅವರು ನೆರವೇರಿಸಿ ಇದೊಂದು ಸೌರ್ಹದಯುತವಾದ ವೇದಿಕೆ ಎಲ್ಲಾ ಜಾತಿ ಜನಾಂಗದ ಸಮ್ಮೇಳನ ಇಂತಹ ಕಾರ್ಯಕ್ರಮದಲ್ಲಿ ಅವಕಾಶಕ್ಕಾಗಿ ತುಂಬಾ ಸಂತೋಷವೆನಿಸುತ್ತದೆ ಎಂದರು.
ನಾಡವರ ಸಂಘದ ಕಾರ್ಯದರ್ಶಿ ಮಂಜೇಶ್ವರ ನಾಯಕ ಮಾತನಾಡಿ, ಮೀನುಗಾರ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಮುನ್ನಡೆಯಬೇಕು. ನಿಮ್ಮ ಜೊತೆಯಲ್ಲಿ ಯಾವತ್ತು ಸಹಾಯ ಸಹಕಾರ ನಿರಂತರವಾಗಿ ನೀಡಲು ಸಿದ್ಧರಿದ್ದೇವೆ ಎಂದರು. ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಮಾತಾಡಿ, ನಾವೆಲ್ಲ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ರಾಜಕೀಯವಾಗಿ ನಮ್ಮನ್ನು ಬಳಸಿಕೊಳ್ಳಲು ಮುಂದಾಗುವುದನ್ನು ಬಿಟ್ಟು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಅಗತ್ಯತೆ ಇದೆ ಎಂದು ನುಡಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಕರವೇ ಹನಿಫ್ ಸಾಬ್ ಮಾತನಾಡಿ, ರಾಜ್ಯೋತ್ಸವದ ಈ ಶುಭ ದಿನದಂದು ಈ ಸಂಘಟನೆಯ ಕಾರ್ಯ ಶ್ಲಾಘನೀಯವಾದದ್ದು. ರಾಜ್ಯೋತ್ಸವದ ಆಚರಣೆಯ ಜೊತೆಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ್ಯ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು. ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ ಕುಡ್ತಲಕರ, ಮೀನುಗಾರರ ಮುಖಂಡರುಗಳಾದ ಜೈವಿಠ್ಠಲ ಕುಬಾಲ, ಭಾಸ್ಕರ್ ಮೊಗೇರ, ರಾಜೇಶ್ವರಿ ಕೇಣಿಕರ, ಹೂವಾ ಖಂಡೇಕರ, ಗುರುದಾಸ ಬಾನಾವಳಿಕರ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತಾನಾಡಿದರು.
ನೂತನ ಸಂಘನೆಯ ಜಿಲ್ಲಾಧ್ಯಕ್ಷ ಹರಿಹರ ವಿ.ಹರಿಕಾಂತ ಹಿಲ್ಲೂರು ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು, ಹಿಂದಿನ ಸಂಘಟನೆಯ ಎಲ್ಲಾ ಸಮಾಜಮುಖಿ ಕಾರ್ಯಕ್ರಮವನ್ನು ಮುಂದುವರೆಸುವುದಾಗಿ ಹಾಗೂ ಇಂತಹ ಸಮಾಜಪರ ಕಾರ್ಯಕ್ರಮ ಸಂಘಟಿಸುವುದು ಕಷ್ಟಕರವಾದ ಕೆಲಸ. ಇಂತಹ ಕಾರ್ಯಕ್ರಮಕ್ಕೆ ಅತೀವ ಶ್ರಮ ವಹಿಸಬೇಕಾಗುತ್ತದೆ. ಸಮಾಜದ ಬೆಂಬಲ ಇದ್ದರೆ ಮಾತ್ರ ಇಂತಹ ಸಮಾಜಪರ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಮುಂದಿನ ದಿನಗಳಲ್ಲಿಯೂ ಕೂಡ ಸಮಾಜ ನನ್ನ ಬೆಂಬಲಕ್ಕೆ ನಿಲ್ಲುತ್ತದೆ ಎನ್ನುವ ವಿಶ್ವಾಸ ಇದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ಮೀನುಗಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಶಿಕ್ಷಕ ಜಿ.ಆರ್.ತಾಂಡೇಲ ಅವರ ಅಭೂತಪೂರ್ವ ಸಾಧನೆಯನ್ನು ಗುರುತಿಸಿ ಅವರಿಗೆ ಸಂಘಟನೆಯಿಂದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ತಾಯಿ ಕನ್ನಾಂಡಾಬೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ರಾಜ್ಯೋತ್ಸವ ಆಚರಣೆಯ ಜೊತೆಗೆ ಕರ್ನಾಟಕ ರತ್ನ ಪುರಸ್ಕೃತ ಪುನೀತ ರಾಜಕುಮಾರವರ ಭಾವಚಿತ್ರಕ್ಕೂ ಮಾಲಾರ್ಪಣೆ ಮಾಡಿ ನುಡಿ ನಮನ ಸಲ್ಲಿಸಲಾಯಿತು. ಪ್ರಾರಂಭದಲ್ಲಿ ಮಾರುತಿ ಹರಿಕಂತ್ರ ಸ್ವಾಗತಿಸಿ ಪ್ರಾಸ್ತವಿಕ ಮಾತಾನಾಡಿದರು. ಕೊನೆಯಲ್ಲಿ ರಾಜು ಹರಿಕಂತ್ರ ವಂದಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಜಿ.ಆರ್.ತಾಂಡೇಲ್ ನಿರೂಪಣೆ ಮಾಡಿದರು. ಸಭೆಯಲ್ಲಿ ನೂರಕ್ಕೂ ಹೆಚ್ಚು ಮೀನುಗಾರರು ಪಾಲ್ಗೊಂಡಿದ್ದರು.