ಸಿದ್ದಾಪುರ: ಪಟ್ಟಣದ ಹಾಲದಕಟ್ಟ ನಾಗರಕಟ್ಟೆ ವಿಭಾಗದ ಶ್ರೀವಾಸುಕಿ ನಾಗದೇವತಾ ಮಂದಿರದಲ್ಲಿ ನವೆಂಬರ್ 29ರಂದು ಶ್ರೀಕ್ಷೇತ್ರಪಾಲ, ಶ್ರೀನಾಗದೇವತಾ ಹಾಗೂ ಶ್ರೀಚೌಡೇಶ್ವರಿ ದೇವರ 13ನೆಯ ವಾರ್ಷಿಕ ವರ್ಧಂತಿ ಮಹೋತ್ಸವ ಆಚರಿಸುವ ಕುರಿತು ಸಭೆಯನ್ನು ಕರೆಯಲಾಯಿತು.
ವೇದಿಕೆಯಲ್ಲಿ ನಾಗದೇವತಾ ಸೇವಾ ಸಮಿತಿಯ ಹಿರಿಯ ಸದಸ್ಯರಾದ ಎಸ್.ವಿ.ಸಿದ್ದೇಶ್ವರ, ಡಿ.ಎನ್.ಶೇಟ್, ಅಚ್ಚುತ ಶಾನಭಾಗ್, ಐ.ಕೆ.ನಾಯ್ಕ, ಶ್ರೀಪತಿ ವೆರ್ಣೇಕರ್ ಉಪಸ್ಥಿತರಿದ್ದರು. ಪ್ರಶಾಂತ ಶೇಟ್ ಎಲ್ಲರನ್ನು ಸ್ವಾಗತಿಸಿ ಮಂದಿರದಲ್ಲಿ ನಡೆಯುವ ಕಲಾವೃದ್ಧಿ ಹವನ, ಗಣಹೋಮ, ಶ್ರೀಸತ್ಯನಾರಾಯಣ ವ್ರತ ಪೂಜಾ ಕಾರ್ಯಕ್ರಮಗಳು, ವೇದಮೂರ್ತಿ ಮೋಹನ್ಕುಮಾರ್ ಜೈನ್ ಬಿದರೂರು ಕಾರ್ಗಲ್, ದಿನೇಶ್ ಭಟ್ ಬೆಡ್ಕಣಿ ಹಾಗೂ ವೇದಮೂರ್ತಿ ದಿನೇಶ್ ಭಟ್ ಕೋನಳ್ಳಿ ಇವರ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಿದರು.
ದಾಮೋದರ್ ಕೆ.ಶಾನಭಾಗ್ ಹಿಂದಿನ ವರ್ಷದ ಲೆಕ್ಕಪತ್ರವನ್ನು ಮಂಡಿಸಿ ಚಂಪಾಷಷ್ಠಿ ನಿಮಿತ್ತ ಅನ್ನ ಸಂತರ್ಪಣೆ ಹಾಗೂ ಸಂಜೆ ನಡೆಯುವ ಭಜನೆ, ಲಲಿತ ಸಹಸ್ರನಾಮ ಪಠಣ, ಕಾರ್ತಿಕ ದೀಪೋತ್ಸವ, ಹರಾಜು ಕಾರ್ಯಕ್ರಮದ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಮಂದಿರದ ಚಾವಣಿಯನ್ನು ನವಿಕರಿಸಬೇಕೆಂದು ನಿರ್ಣಯಿಸಲಾಯಿತು. ವಿನಾಯಕ ಮಿತ್ರ ಮಂಡಳಿ, ಮಹಿಳಾ ಮಂಡಳಿಯ ಹಾಗೂ ಉಪಸ್ಥಿತರಿದ್ದ ಎಲ್ಲಾ ಸದಸ್ಯರು 13ನೇ ವರ್ಧಂತಿ ಉತ್ಸವ ಹಾಗೂ ಸಂಜೆ ಜರುಗುವ ಸುಬ್ರಹ್ಮಣ್ಯ ಷಷ್ಠಿ ನಿಮಿತ್ತ ಕಾರ್ತಿಕ ದೀಪೋತ್ಸವ ಅತೀ ವಿಜೃಂಭಣೆಯಿಂದ ನಡೆಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು. ಮಂದಿರದಲ್ಲಿ ಶ್ರೀರಾಮತಾರಕ ಮಂತ್ರ ಜಪಯಜ್ಞ ಅಭಿಯಾನ ಹಮ್ಮಿಕೊಳ್ಳುವ ಕುರಿತು ವಿವರಿಸಲಾಯಿತು. ಪ್ರಶಾಂತ್ ಡಿ.ಶೇಟ್ ವಂದಿಸಿದರು.