ಹೊನ್ನಾವರ: ತಾಲೂಕಿನ ಮುಗ್ವಾ ಗ್ರಾ.ಪಂ. ವ್ಯಾಪ್ತಿಯ ಕವಲಕ್ಕಿಯಲ್ಲಿ ಬಸ್ ಪ್ರಯಾಣಿಕರ ತಂಗುದಾಣ ಕೆಡವಿ ಹೊಸ ಕಟ್ಟಡ ಕಟ್ಟುವ ವಿಚಾರ ಇದೀಗ ವಿವಾದವಾಗಿ ಪರಿಣಮಿಸಿದೆ. ಒಂದು ಹಂತದಲ್ಲಿ ಕೆಲವರಿಗೆ ಬಸ್ ತಂಗುದಾಣ ಸ್ಥಳಾಂತರ ಪ್ರತಿಷ್ಠೆಯ ವಿಷಯವಾಗಿ ಸಮಸ್ಯೆ ಉದ್ಭವಿಸಲು ಕಾರಣವಾಗಿದೆ.
ಹಲವು ವರ್ಷಗಳಿಂದ ಇದ್ದ ಬಸ್ ಪ್ರಯಾಣಿಕರ ತಂಗುದಾಣವನ್ನು ಕೆಡವಿ ಆಧುನಿಕ ಶೈಲಿಯಲ್ಲಿ ಕಟ್ಟುವ ಉದ್ದೇಶದಿಂದ ಸ್ಥಳೀಯ ಜನಪ್ರತಿನಿಧಿಗಳು ನಿರ್ಧರಿಸಿ ಪುನಃ ನಿರ್ಮಿಸುವ ಕೆಲಸಕ್ಕೆ ಕೈ ಹಚ್ಚಿದ್ದರು. ಶಾಸಕ ದಿನಕರ ಶೆಟ್ಟಿ ಬಳಿ ಈ ಬಗ್ಗೆ ಮನವಿ ಮಾಡಿದಾಗ ಹೊಸ ಬಸ್ ತಂಗುದಾಣಕ್ಕೆ 3 ಲಕ್ಷ ಹಣ ಮಂಜೂರಿಯನ್ನು ಮಾಡಿದ್ದಾರೆ.
ಈ ಹಿಂದೆ ಬಹಳ ವರ್ಷದಿಂದ ಇದ್ದ ಬಸ್ ತಂಗುದಾಣ ಜನ ಬಳಕೆ ಕಡಿಮೆ ಇತ್ತು ಅನ್ನುವುದು ಬಿಟ್ಟರೆ ಕಟ್ಟಡ ಸುಸಜ್ಜಿತವಾಗಿತ್ತು. ಇತ್ತೀಚಿಗೆ ಚಾವಣಿ ದುರಸ್ತಿ, ಬಣ್ಣ ಬಳಿಯುವ ಕಾರ್ಯ ಕೂಡ ಮಾಡಲಾಗಿತ್ತು. ಆಧುನಿಕ ಶೈಲಿಯ ತಂಗುದಾಣ ಕಟ್ಟಬೇಕು ಅನ್ನುವ ಒಂದೇ ಕಾರಣಕ್ಕೆ ಬಹುವರ್ಷದ ಹಳೆ ಕಟ್ಟಡ ಕೆಡವಲಾಗಿದೆ. ಕೆಡವಿದ ಮೇಲೆ ಈ ಹಿಂದೆ ಇದ್ದ ಜಾಗ ಬಿಟ್ಟು ಬೇರೆ ಕಡೆ ಕಟ್ಟಲು ಹೋಗಿದ್ದು ವಿವಾದ ಹುಟ್ಟು ಹಾಕಿದೆ. ಜನರ ವಿರೋಧ ಇದ್ದರೂ ಬೇರೆ ಕಡೆ ಒಂದು ಹಂತದಲ್ಲಿ ಕಲ್ಲಿನ ಗೋಡೆ ಕಟ್ಟಿ ಕೆಲಸ ಪ್ರಗತಿಯಲ್ಲಿದೆ.
ಈ ಹಿಂದೆ ಇದ್ದ ಕಟ್ಟಡದ ಸ್ಥಳ ಬಿಟ್ಟು ಸ್ವಲ್ಪ ದೂರದ ಬೇರೆ ಕಡೆ ಕಟ್ಟಲು ಹೊರಟಿದ್ದು ಯಾಕೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಲು ಪ್ರಾರಂಭ ಮಾಡಿದೆ. ಇಲ್ಲಿಯ ತನಕ ಗ್ರಾಮ ಪಂಚಾಯತಕ್ಕೆ ಈ ಹಿಂದೆ ಇದ್ದ ಕಟ್ಟಡದಿಂದ ತೊಂದರೆಯಾಗಿದೆ ಎನ್ನುವ ಬಗ್ಗೆ ಯಾವುದೇ ಅರ್ಜಿಯು ಕೂಡ ಬಂದಿಲ್ಲ. ಈಗ ಕಟ್ಟಡ ಕೆಡವಿದ ಮೇಲೆ ಅಲ್ಲಿ ಕಟ್ಟಬೇಡಿ ಅನ್ನುವ ಅರ್ಜಿ ಕೂಡ ಬಂದಿಲ್ಲ ಎಂದು ಗ್ರಾಮ ಪಂಚಾಯತ ಮೂಲದಿಂದ ತಿಳಿದು ಬಂದಿದೆ. ಹಾಗಿದ್ದರೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಹಿಂದೆ ಇರುವ ಕಟ್ಟಡವನ್ನು ಅದೇ ಸ್ಥಳದಲ್ಲಿ ಮುಂದುವರಿಸಲು ಇರುವ ಅಡೆತಡೆ ಏನು..? ಎನ್ನುವ ಪ್ರಶ್ನೆಗೆ ಉತ್ತರ ಸಿಗದಾಗಿದೆ.
ಬಸ್ ತಂಗುದಾಣ ಸ್ಥಳಾಂತರ ಮಾಡಬಾರದು. ಇದ್ದ ಜಾಗದಲ್ಲೆ ಕಟ್ಟಬೇಕು ಎಂದು ಸಾರ್ವಜನಿಕರು ಕೂಡ ತಕರಾರು ಮಾಡಿ ಗ್ರಾಮ ಪಂಚಾಯತಕ್ಕೆ ಅರ್ಜಿ ಕೊಟ್ಟಿದ್ದಾರೆ. ಕೆಲವು ಸಂಘಟನೆಯವರು ಕೂಡ ಸ್ಥಳಕ್ಕೆ ಬಂದು ಸಾರ್ವಜನಿಕರ ಅಹವಾಲು ಕೇಳಿ, ಪಿಡಿಓರವರ ಹತ್ತಿರ ಮಾಹಿತಿ ಪಡೆದು ಸ್ಥಳಾಂತರ ಮಾಡದಂತೆ ತಿಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಎಷ್ಟೇ ತಕರಾರು ಮಾಡಿದರು ಕ್ಯಾರೇ ಎನ್ನದೆ ಬೇರೆ ಜಾಗದಲ್ಲೆ ಕಟ್ಟಡ ಕಟ್ಟುವ ಕೆಲಸ ಮುಂದುವರಿದಿದೆ. ಯಾರ ಮಾತು ಕೇಳದೆ, ತಾವು ಮಾಡಿದ್ದೆ ಸರಿ ಎನ್ನುವ ಮನಃಸ್ಥಿತಿ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.