ಹೊನ್ನಾವರ: ರಾಜ್ಯೋತ್ಸವದಂದೂ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಬಾವುಟ ಹಾರಿಸದಿರುವ ಬಗ್ಗೆ ಕಸಾಪ ತಾಲೂಕಾ ಘಟಕದ ಮಾಜಿ ಕಾರ್ಯದರ್ಶಿ ಶಂಕರ ಗೌಡ ಗುಣವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕು ಪಂಚಾಯತಿ, ಮಿನಿ ವಿಧಾನಸೌಧದ ತಾಲೂಕು ದಂಡಾಧಿಕಾರಿಗಳ ಕಚೇರಿಗಳಲ್ಲಿ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿ ಮೇಲೆ ಒಂದೇ ಒಂದು ಕನ್ನಡ ಬಾವುಟ ಇಲ್ಲ. ಒಂದು ಕಾಲಘಟ್ಟದಲ್ಲಿ 25 ವರ್ಷಗಳ ಕಾಲ ನಿರಂತರವಾಗಿ ಪಟ್ಟಣದ ಉದ್ದಗಲಕ್ಕೂ ಕನ್ನಡ ಬಾವುಟಗಳನ್ನ ಕಟ್ಟಿ ಹಾರಿಸಿ ಕನ್ನಡದ ಹಬ್ಬವನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸಿದ ನೆಲ ಇದು. ಆದರೆ ಇವತ್ತು ಎಂತ ಶೋಚನೀಯವೆಂದರೆ, ಆಳುವ ಸರ್ಕಾರಕ್ಕೆ ಕನ್ನಡದ ಮೇಲೆ ಅಭಿಮಾನ ಇಲ್ಲ. ಕನ್ನಡಕ್ಕೆ ಒಂದು ಶಾಸ್ತ್ರೀಯ ಸ್ಥಾನಮಾನ ಕೊಡಬೇಕು ಎನ್ನುವ ಒಳ ತುಡಿತ ಅಥವಾ ಆಲೋಚನೆಗಳು ಇಲ್ಲ ಎಂದಿದ್ದಾರೆ.
ಕರ್ನಾಟಕ ರಾಜ್ಯದ ಉದಯದ ದಿನ ಕರ್ನಾಟಕದ ಪ್ರತಿ ಕಛೇರಿಗಳ ಮೇಲೆ ಕನ್ನಡ ಧ್ವಜ ಹಾರಾಡಬೇಕಿತ್ತು. ಇವತ್ತು ಅಲ್ಲೋ ಇಲ್ಲೋ ಅಭಿಮಾನಕ್ಕೆ ಯಾವುದೋ ರಿಕ್ಷಾದವರೊ ಅಥವಾ ಆಟೋ ಸ್ಟ್ಯಾಂಡ್ನವರು ಕನ್ನಡ ನಾಡಿನ ಹಬ್ಬ ಎಂದು ಆಚರಣೆ ಮಾಡುವುದು ಬಿಟ್ಟರೆ ಕನ್ನಡ ಬಹುಶಃ ಬಹುತೇಕ ಎಲ್ಲರ ಹೃದಯದಲ್ಲಿ ಮಾಯವಾಗಿದೆ. ಒಂದು ಪಕ್ಷ, ಒಂದು ವ್ಯಕ್ತಿಗೆ ಸೇರಿದ ಬಾವುಟ ಹಾರಾಡುತ್ತದೆ. ಆದರೆ ಕನ್ನಡದ ಬಾವುಟ ಎಲ್ಲೂ ಹಾರಾಡುತ್ತಿಲ್ಲ ಎಂದಿದ್ದಾರೆ.