ಮುಂಡಗೋಡ: ನಮಗೆ ಅತಿ ಹತ್ತಿರದ ಸ್ವರ್ಗ ಎಂದರೆ ನಾವು ಹುಟ್ಟಿದ ಊರು, ನಮ್ಮ ಜಿಲ್ಲೆ ಹಾಗೂ ನಮ್ಮ ರಾಜ್ಯ. ಆದ್ದರಿಂದ ನಾವುಗಳು ನೆಲ- ಜಲಗಳ ಬಗ್ಗೆ ಇಂದಿನ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಿಸಬೇಕಾಗಿದೆ ಎಂದು ರೋಟರಿ ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ಸರೋಜಾ ಛಬ್ಬಿ ಹೇಳಿದರು.
ಅವರು ಕನ್ನಡ ರಾಜ್ಯೋತ್ಸವ ಅಂಗವಾಗಿ ಬ್ಯಾನಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ನಾಡಿನ ಕುರಿತು ವಿವಿಧ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಜಿ ಅಧ್ಯಕ್ಷೆ ಶಶಿರೇಖಾ ಬೈಜು ಮಾತನಾಡಿ, ಇಗಿನ ಮಕ್ಕಳಲ್ಲಿ ಮಾತೃ ಭಾಷೆಯಲ್ಲಿ ಆಸಕ್ತಿ ಕೊರತೆ ಕಾಣುತ್ತಿದೆ. ಆದ್ದರಿಂದ ಮಕ್ಕಳಿಗೆ ಆದಷ್ಟು ಹೆಚ್ಚು ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಬೇಕು ಎಂದು ಹೇಳಿದರು.
ಹಿಂದುಳಿದ ಗೌಳಿ ಜನಾಂಗ ಇರುವ ಬ್ಯಾನಳ್ಳಿ ಶಾಲೆಯ ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ, ಪ್ರಶಸ್ತಿ ಪತ್ರಗಳನ್ನು ಹಾಗೂ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ದಿವ್ಯಾರಾವ್, ಐಎಸ್‌ಒ ಸಿಂಧೂ ಥಾಮಸ್, ಜಯಶ್ರೀ ಕೊಳುರ, ಹರಣಿ ಪ್ರಸಾದ, ಕವಿತಾ ಮಾತ್ರೋಜಿ ಮುಂತಾದವರಿದ್ದರು. ಮುಖ್ಯ ಶಿಕ್ಷಕ ವಸಂತಕುಮಾರ ರಾಥೋಡ ಸ್ವಾಗತಿಸಿದರು. ಸಹಶಿಕ್ಷಕ ಮಂಜುನಾಥ ಕಬ್ಬನೂರ ವಂದಿಸಿದರು.