ಸಿದ್ದಾಪುರ: ಕನ್ನಡ ಭಾಷೆಯು ಮನ, ಮನೆಯ ಭಾಷೆಯಾಗಿ ಬೆಳೆಯಬೇಕು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದು ತಹಶೀಲ್ದಾರ ಸಂತೋಷ ಭಂಡಾರಿ ಹೇಳಿದರು.
ಅವರು ಪಟ್ಟಣದ ನೆಹರೂ ಮೈದಾನದಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕರ್ನಾಟಕ ಎಂದರೆ ಗಡಿ ರೇಖೆಯೊಳಗಿನ ಸೀಮಿತ ಗಡಿ ಪ್ರದೇಶವಲ್ಲ. ರಾಷ್ಟ್ರೀಯ ಸಂಸ್ಕೃತಿಯನ್ನು ಕನ್ನಡದ ಸ್ವಂತ ವ್ಯಕ್ತಿತ್ವದ ಹಿನ್ನಲೆಯಲ್ಲಿ ಪ್ರತಿಪಾದಿಸುವ ಅತ್ಯುನ್ನತ ಭಾವವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಧಕರಾದ ಸಾಹಿತಿ ಆರ್.ಕೆ.ಹೊನ್ನೆಗುಂಡಿ, ಸಂಗೀತ ಕ್ಷೇತ್ರದ ರಾಜೇಂದ್ರ ಕೊಳಗಿ, ಜಾನಪದ ಸಾಹಿತ್ಯದ ನಿಂಗಪ್ಪ ಎಲ್ಲಪ್ಪ ಬ್ಯಾಡಗಿ ಅವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ಭುವನಗಿರಿಯ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ದೇವಾಲಯಲ್ಲಿ ಜ್ಯೋತಿ ಬೆಳಗಿಸಿ ಜ್ಯೋತಿಯನ್ನು ಮೆರವಣಿಗೆಯ ಮೂಲಕ ಪಟ್ಟಣದ ನೆಹರೂ ಮೈದಾನಕ್ಕೆ ತರಲಾಯಿತು.
ಕಾರ್ಯಕ್ರಮದಲ್ಲಿ ಸಿಪಿಐ ಕುಮಾರ ಕೆ., ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಕನ್ನಡ ಪರ ಸಂಘಟನೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಇದ್ದರು.