ಅಂಕೋಲಾ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿವಾಡ ಬೇಲೆಕೇರಿಯಲ್ಲಿ ವಯೋ ನಿವೃತ್ತಿ ಹೊಂದಿದ ಮಾಲತಿ ಗೋವಿಂದ ನಾಯಕ ಅವರನ್ನು ಅವರ ಮನೆಯಂಗಳ ಬೇಲೆಕೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಲತಿ ನಾಯಕ ಅವರು, ಸಂಘ ನನಗೆ ನೀಡಿದ ಗೌರವ ನನ್ನ ಜೀವಮಾನದಲ್ಲಿ ಮರೆಯಲಾಗದ ನೆನಪಾಗಿ ಉಳಿಯಲಿದ್ದು, ಸಂಘದ ಈ ಕಾರ್ಯ ನನಗೆ ಹೆಮ್ಮೆಯನ್ನು ತಂದಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ಮಾತನಾಡಿ, ಶಿಕ್ಷಕ ವೃತ್ತಿ ಸಮಾಜದಲ್ಲಿ ಬಹಳ ಗುರುತರವಾದ ಜವಾಬ್ದಾರಿಯುತ ಸ್ಥಾನವಾಗಿದ್ದು, ಬಹಳ ವರ್ಷಗಳ ಕಾಲ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ ಹೊಂದುತ್ತಿರುವ ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವುದು ಸಂಘಕ್ಕೆ ಬಹಳ ಹೆಮ್ಮೆಯೆನಿಸಿದೆ ಎಂದರು.
ಸಂಘದ ಉಪಾಧ್ಯಕ್ಷೆ ಭಾರತಿ ಬಿ.ನಾಯಕ, ಸದಸ್ಯ ಶೇಖರ ಗಾಂವಕರ, ನಿತ್ಯಾನಂದ ಗಾಂವಕರ, ಸುಪ್ರಿತಾ ನಾಯಕ ಅಭಿನಂದನಾ ಮಾತುಗಳನ್ನಾಡಿದರು. ಸಂಘದ ಸದಸ್ಯರಾದ ಸಂಜೀವ ಆರ್. ನಾಯಕ, ಆನಂದು ವಿ. ನಾಯ್ಕ, ದಿವಾಕರ ದೇವನಮನೆ, ವೆಂಕಮ್ಮ ನಾಯಕ, ವಿನಾಯಕ ಪಿ. ನಾಯ್ಕ, ಚಂದ್ರಕಾಂತ ಗಾಂವಕರ, ನಿವೃತ್ತ ಶಿಕ್ಷಕಿ ಸುಶೀಲಾ ನಾಯಕ, ಶಾಲಾ ಮುಖ್ಯಾಧ್ಯಾಪಕ ಮಧುಕರ ಕೇಣಿ, ಅಂಕಿತಾ ಬಾನಾವಳಿಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್. ನಾಯಕ ಸ್ವಾಗತಿಸಿದರು. ಸದಸ್ಯೆ ಶೋಭಾ ಎಸ್.ನಾಯಕ ವಂದಿಸಿದರು.