ಕುಮಟಾ: ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುವ ಮಕ್ಕಳಿಗೆ ಕೀಳರಮೆ ಎಂದಿಗೂ ಸಲ್ಲದು. ಹೊಸ ಶಿಕ್ಷಣ ನೀತಿಯೂ ಮಾತೃಭಾಷೆಗೇ ಮನ್ನಣೆ ನೀಡುತ್ತಿದೆ. ನಾಳಿನ ಸದೃಢ ಕನ್ನಡ ನಾಡು ನಿರ್ಮಾಣಕ್ಕೆ ನೀವೆಲ್ಲಾ ಪಣತೊಡಬೇಕು ಎಂದು ವಿಶ್ರಾಂತ ಮುಖ್ಯಾಧ್ಯಾಪಕ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ತಾಲೂಕಾಧ್ಯಕ್ಷ ಎನ್.ಆರ್.ಗಜು ನುಡಿದರು.
ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕಿ ಗಿರಿಜಾ ಲಕ್ಕುಮನೆ ರಾಜ್ಯೋತ್ಸವದ ಶುಭಾಶಯ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಪಾಂಡುರಂಗ ವಾಗ್ರೇಕರ ಕರ್ನಾಟಕ ರಾಜ್ಯ ಉದಯಿಸಿದ ಇತಿಹಾಸವನ್ನು ವಿವರಿಸಿದರು. ಮಕ್ಕಳೇ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕವೃಂದದವರು ಸಹಕರಿಸಿದರು. ಕನ್ನಡಾಂಬೆಗೆ ಪುಷ್ಪಾರ್ಚನೆ, ಕನ್ನಡ ಗೀತೆಗಳು, ಕನ್ನಡ ನಾಡ-ನುಡಿಯ ಕುರಿತ ಭಾಷಣಗಳಲ್ಲಿ ಮಕ್ಕಳು ಭಾಗವಹಿಸಿದರು.