ಕುಮಟಾ: ಗಿಬ್ ಸರ್ಕಲ್ನಲ್ಲಿರುವ ಪುರಸಭೆಯ ವ್ಯಾಯಾಮ ಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಶಾಸಕ ದಿನಕರ ಶೆಟ್ಟಿ ಅವರು ಪವರ್ ಲಿಪ್ಟಿಂಗ್ ಮಾಡುವ ಮೂಲಕ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಈ ವ್ಯಾಯಾಮ ಶಾಲೆಯ ಕಟ್ಟಡವನ್ನು ನಿರ್ಮಿಸಿಕೊಡುವ ಬಗ್ಗೆ ವಿದ್ಯಾರ್ಥಿಗಳು ನನ್ನ ಗಮನಕ್ಕೆ ತಂದಿದ್ದರು. ಅದರಂತೆ ಕಟ್ಟಡ ಕಟ್ಟಿಸಿಕೊಡಲಾಗಿದೆ. ಆದರೆ ಈ ಕಟ್ಟಡಕ್ಕೆ ಶೀಟ್ ಹಾಕಿದ್ದರಿಂದ ವ್ಯಾಯಾಮ ಮಾಡಲು ಕಷ್ಟವಾಗುತ್ತದೆ ಎಂಬ ವಿಷಯವೂ ನನ್ನ ಗಮನಕ್ಕೆ ಬಂದಿದೆ. ಅದಕ್ಕೆ 5 ಲಕ್ಷ ರೂ. ಬೇಕಾಗಿದೆ. ಬೆಣ್ಣೆ ಕುಟುಂಬ ಈ ವ್ಯಾಯಾಮ ಶಾಲೆಗೆ ನೆರವು ನೀಡಿದೆ. ಈ ಮೇಲ್ಛಾವಣಿಯನ್ನು ಬದಲಾಯಿಸುವ ವ್ಯವಸ್ಥೆಗೆ ಸಹಕಾರ ನೀಡುತ್ತಾರೆಂದು ನಾನು ನಂಬಿದ್ದೇನೆ ಎಂದರು.
ಪುರಸಭೆ ಚೇರಮೆನ್ ಶುಶೀಲಾ ನಾಯ್ಕ ಮಾತನಾಡಿ, ಮನುಷ್ಯನಿಗೆ ಆಹಾರದ ಜೊತೆಗೆ ನಿಯಮಿತ ವ್ಯಾಯಾಮವೂ ಅಷ್ಟೆ ಮುಖ್ಯ. ಹಾಗಾಗಿ ಈ ವ್ಯಾಯಾಮ ಶಾಲಾ ಕಟ್ಟಡವನ್ನು ನಮ್ಮ ಶಾಸಕರು ಉದ್ಘಾಟಿಸುವ ಮೂಲಕ ಲೋಕಾರ್ಪಣೆಗೊಳಿಸಿದ್ದಾರೆ. ಈ ಸುಸಜ್ಜಿತ ಕಟ್ಟಡದಿಂದ ವ್ಯಾಯಾಮಪಟುಗಳಿಗೆ ಅನುಕೂಲವಾಗಲಿದೆ ಎಂದರು.
ತಹಸೀಲ್ದಾರ್ ವಿವೇಕ ಶೇಣ್ವಿ ಮಾತನಾಡಿ, ನಮ್ಮ ಸಹಾಯ ಆಯುಕ್ತರು ಕೂಡ ಪ್ರತಿನಿತ್ಯ ವ್ಯಾಯಾಮ ಮಾಡುತ್ತಾರೆ. ಈ ಶಾಲೆಯನ್ನು ಅಭಿವೃದ್ಧಿ ಪಡಿಸುವ ಸಂಬಂಧ ಕೆಲ ಅಧಿಕಾರಿಗಳ ಬಳಿ ಚರ್ಚಿಸಿದ್ದರು. ಅವರ ಅನುಪಸ್ಥಿತಿಯಲ್ಲಿ ನಾನು ಈ ಕಾರ್ಯಕ್ರಮದಲ್ಲಿ ಹಾಜರಿದ್ದು, ವ್ಯಾಯಾಮ ಶಾಲೆಯ ಅಭಿವೃದ್ಧಿಗೆ ನಾವೆಲ್ಲ ಕೈಜೋಡಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷೆ ಅನುರಾಧ ಬಾಳೇರಿ ವಹಿಸಿದ್ದರು. ಈ ಸಂದರ್ಭದಲ್ಲಿ ದಾನಿಯಾದ ನಾಗೇಶ ಬೆಣ್ಣೆ, ಪವರ್ ಲಿಪ್ಟರ್ ಪಟು ವೆಂಕಟೇಶ ಪ್ರಭು ಸೇರಿದಂತೆ ವ್ಯಾಯಾಮ ಶಾಲೆಯ ಶಿಕ್ಷಕ, ಗುತ್ತಿಗೆದಾರರನ್ನು ಸನ್ಮಾನಿಸುವ ಮೂಲಕ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಇಒ ರಾಜೇಂದ್ರ ಭಟ್, ಪುರಸಭೆ ಮುಖ್ಯಾಧಿಕಾರಿ ಅಜಯ್ ಭಂಡರ್ಕರ್, ಉಪಾಧ್ಯಕ್ಷೆ ಸುಮತಿ ಭಟ್, ಸದಸ್ಯರಾದ ಮಹೇಶ ನಾಯ್ಕ, ಮೋಹಿನಿ ಗೌಡ, ಗೀತಾ ಮುಕ್ರಿ, ಶೈಲಾ ಗೌಡ, ಟೋನಿ ರೋಡ್ರಗೀಸ್, ಸೂರ್ಯಕಾಂತ ಗೌಡ, ಬಿಜೆಪಿ ಮಂಡಲಾಧ್ಯಕ್ಷ ಹೇಮಂತ ಕುಮಾರ ಗಾಂವ್ಕರ್, ಬಿಜೆಪಿ ಪ್ರಮುಖರಾದ ಕುಮಾರ ಮಾರ್ಕಾಂಡೆ ಇತರರು ಇದ್ದರು. ಶಿಕ್ಷಕ ಮಂಜುನಾಥ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.