ದಾಂಡೇಲಿ: ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ಮಂಗಳವಾರ ಆಚರಿಸಲಾಯಿತು. ನಗರಸಭೆಯ ಆವರಣದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ನಗರದ ವಿವಿಧ ಶಾಲಾ ಕಾಲೇಜುಗಳಿಂದ ಮಾಡಲ್ಪಟ್ಟ ಸ್ಥಬ್ದಚಿತ್ರಗಳು ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದವು. ಕಾಂತಾರ ಚಲನ ಚಿತ್ರದ ಪಂಜುರ್ಲಿ, ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಸಾರುವ ಸ್ಥಬ್ದಚಿತ್ರ, ಯಕ್ಷಗಾನ ವೇಷ, ಹಾಲಕ್ಕಿ, ಮೀನುಗಾರರ ಕಲಾ ಸಂಸ್ಕೃತಿ, ಕೊಡಗು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಕಲಾ ಸಂಸ್ಕೃತಿಯನ್ನು ಸಾರುವ ಕಲೆಗಳು, ಕೋವಿಡ್ ಮತ್ತು ಆರೋಗ್ಯ ಇಲಾಖೆ ಇವುಗಳ ಜೊತೆಗೆ ಇತಿಹಾಸ ಪರುಷರ ವೇಷ ಸೇರಿದಂತೆ ನಾಡಿನ ಕಲೆ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವಾರು ರೂಪಕಗಳು ಗಮನ ಸೆಳೆದವು. ಇದರ ಜೊತೆಗೆ ಉಡುಪಿ ಜಿಲ್ಲೆಯ ಕಾಪುವಿನಿಂದ ತರಿಸಿದ್ದ ಚಂಡೆ ವಾದನ ಹಾಗೂ ನೃತ್ಯ ಮೆರವಣಿಗೆಯುದ್ದಕ್ಕೂ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ನಗರಸಭಾ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಮೌಲಾಲಿ ಮುಲ್ಲಾ, ಸದಸ್ಯರುಗಳು, ಪೌರಾಯುಕ್ತ ಆರ್.ಎಸ್.ಪವಾರ್, ಡಿವೈಸ್ಪಿ ಗಣೇಶ್ ಕೆ.ಎಲ್., ಸಿಪಿಐ ಬಿ.ಎಸ್.ಲೋಕಾಪುರ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ ಹಾಲಮನ್ನವರ, ಉಪ ತಹಶೀಲ್ದಾರ್ ರಾಘವೇಂದ್ರ ಪೂಜೇರಿ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಪಿಎಸೈಗಳಾದ ಕಿರಣ್ ಪಾಟೀಲ್, ಕೃಷ್ಣ ಗೌಡ ಮುಂತಾದವರು ಪಾಲ್ಗೊಂಡಿದ್ದರು.