ಬೆಂಗಳೂರು: ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಗೆ ಏಷ್ಯಾದಿಂದಲೇ ಪ್ರಥಮ ಬಾರಿಗೆ ನೇಮಕಗೊಂಡಿರುವ ಕೋಲಾರದ ಡಾ.ಕೆ.ಪಿ.ಅಶ್ವಿನಿ ಅವರನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಕಾಸಸೌಧದಲ್ಲಿ ಸನ್ಮಾನಿಸಿದರು.
ಶ್ರಮಜೀವಿಗಳು ಹಾಗೂ ಶೋಷಿತರ ಪರವಾದ ತಮ್ಮ ಅಧ್ಯಯನ ಮತ್ತು ನಿಲುವುಗಳು ಪ್ರಶಂಸನೀಯ. ಇದೀಗ ತಾವು ವಿಶ್ವ ಸಂಸ್ಥೆಯ ಮಾನವ ಹಕ್ಕು ಸಮಿತಿಗೆ ನೇಮಕಗೊಂಡಿರುವುದು ಇಡೀ ದೇಶವೇ ಹೆಮ್ಮೆ ಪಡುವ ಸಂಗತಿ. ತಾವು ವಿಶ್ವಸಂಸ್ಥೆಯಲ್ಲೂ ಭಾರತದ ಕೀರ್ತಿ ಬೆಳಗಿಸಿ ಎಂದು ಸಚಿವರು ಆಶಯ ವ್ಯಕ್ತಪಡಿಸಿದರು.
ಸಚಿವರಿಂದ ಗೌರವ ಸ್ವೀಕರಿಸಿದ ಡಾ.ಕೆ.ಪಿ.ಅಶ್ವಿನಿ, ವರ್ಣಬೇಧ, ಜನಾಂಗೀಯ ಬೇಧ, ಅಸಹಿಷ್ಣತೆಗೆ ಸಂಬಂದಿಸಿದ ವಿಷಯಗಳನ್ನು ವಿಶ್ವಸಂಸ್ಥೆಯಲ್ಲಿ ನಿರ್ವಹಿಸಬೇಕಿದೆ. ದಲಿತ ಮಹಿಳೆಯಾಗಿ, ಭಾರತೀಯ ಮಹಿಳೆಯಾಗಿ ಇದೊಂದು ಒಳ್ಳೆಯ ಅವಕಾಶವಾಗಿರುವುದು ಖುಷಿ ತಂದಿದೆ. ಇದನ್ನು ಸಮರ್ಪಕವಾಗಿ ನಿಭಾಯಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗಡೆ, ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ಡಾ.ಇ.ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಇಲಾಖೆ ಆಯುಕ್ತ ಡಾ.ಕೆ.ರಾಕೇಶ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಡಾ.ಕೆ.ಪಿ.ಅಶ್ವಿನಿ ಅವರ ಕುಟುಂಬಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.