ಸಿದ್ದಾಪುರ: ಕನ್ನಡಿಗರ ಮಾತೆ ಎಂಬ ಖ್ಯಾತಿ ಪಡೆದಿರುವ ತಾಲೂಕಿನ ಶ್ರೀಕ್ಷೇತ್ರ ಭುವನಗಿರಿಯ ಶ್ರೀ ಭುವನೇಶ್ವರೀ ಮಾತೆಯ ಸನ್ನಿಧಿಯಲ್ಲಿ ನ.1ರಂದು ಮಾತೃವಂದನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಭುವನೇಶ್ವರೀ ಮಾತೆಗೆ ಪೂಜೆ, ಕನ್ನಡ ಧ್ವಜಾರೋಹಣ ನಂತರ ಸಭಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ, ಸಮಾಜಮುಖಿ ಕಾರ್ಯಮಾಡಿದ ಎಲೆಮರೆಯ ಕಾಯಿಯಂತಿದ್ದವರನ್ನು ಗುರುತಿಸಿ ಅವರಿಗೆ ‘ಶ್ರೀಮಾತಾ ಗೌರವ ಸಂಮಾನ’ ಪ್ರದಾನ ಮಾಡುತ್ತಾ ಬರಲಾಗಿದೆ.
ಕನ್ನಡ ರಾಜ್ಯೋತ್ಸವದಂದು ಮಾತೃವಂದನಾ ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶ ತಿಮ್ಮಯ್ಯ ಜಿ. ಉದ್ಘಾಟಿಸಲಿದ್ದಾರೆ. ತಹಶೀಲ್ದಾರ ಸಂತೋಷ ಭಂಡಾರಿ, ಶಿಕ್ಷಣಾಭಿಮಾನಿ ಆರ್.ಎಸ್.ಹೆಗಡೆ, ಬೇಡ್ಕಣಿ ಗ್ರಾ.ಪಂ.ಸದಸ್ಯ ಗೋವಿಂದ ನಾಯ್ಕ ಪಾಲ್ಗೊಳ್ಳಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರ ಭುವನಗಿರಿ ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ವಹಿಸಲಿದ್ದಾರೆ. ಯಾವತ್ತೂ ಕಾರ್ಯಕ್ರಮಗಳಲ್ಲಿ ಕನ್ನಡಾಭಿಮಾನಿಗಳು, ಕನ್ನಡ ಮಾತೆಯ ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಂಘಟಕರು ಕೋರಿದ್ದಾರೆ.
2006ನೇ ಇಸವಿಯಿಂದಲೂ ಕನ್ನಡ ರಾಜ್ಯೋತ್ಸವದ ದಿನದಂದು ಮಾತೃವಂದನಾ ಕಾರ್ಯಕ್ರಮವನ್ನು ಸಂಘಟಿಸುತ್ತಾ ಬರಲಾಗಿದೆ. ಈ ಕನ್ನಡ ಪರವಾದ ಕಾರ್ಯಕ್ರಮದಲ್ಲಿ ತಾಳಮದ್ದಲೆ, ಯಕ್ಷ ನೃತ್ಯ, ಭರತನಾಟ್ಯ, ಲಾವಣಿ, ಭಾವಗೀತೆ, ಭಕ್ತಿಗೀತೆ, ಗೀಗೀ ಪದ, ಕೋಲಾಟ, ಜಾನಪದ ನೃತ್ಯ, ಏಕಪಾತ್ರಾಭಿನಯಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ.
ಪ್ರಸ್ತುತ ವರ್ಷದ ಮಾತೃವಂದನಾ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ.ಎಸ್.ಆರ್.ಹೆಗಡೆ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಶ್ರೀಧರ ಹೆಗಡೆ ಹುಲಿಮನೆ, ಸಾಹಿತಿ, ವಿಶ್ರಾಂತ ಮುಖ್ಯಾಧ್ಯಾಪಕ ಪದ್ಮಾಕರ ಮಡಗಾಂವಕರ, ವಿಶ್ರಾಂತ ಮುಖ್ಯಾಧ್ಯಾಪಕ, ಸಾಹಿತಿ ಶ್ರೀಪಾದ ಹೆಗಡೆ ಮಗೇಗಾರ,ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಸೆಚಿತ್ತಾರ ಕಲಾವಿದ ಈಶ್ವರ ನಾಯ್ಕ ಹಸ್ವಂತೆ, ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರಗ್ರಾಹಕ ನಾಗೇಂದ್ರ ಮುತ್ಮುರ್ಡು ಅವರುಗಳಿಗೆ “ಶ್ರೀಮಾತಾ ಗೌರವ ಸಂಮಾನ ಪ್ರದಾನ ಮಾಡಲಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣಾಭಿಮಾನಿ ಆರ್.ಎಸ್.ಹೆಗಡೆ ಶಿರಸಿ ಅವರ ಸಹಕಾರದಲ್ಲಿ ಎಸ್ಎಸ್ಎಲ್ಸಿಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಪ್ರತಿಭಾ ಪುರಸ್ಕಾರ ನೀಡುತ್ತಾ ಬರಲಾಗಿದೆ.ದೇವಾಲಯದ ಮಾತೃವಂದನಾ ಸಮಿತಿ ಸಂಘಟಿಸುವ ಈ ಕಾರ್ಯಕ್ರಮದಲ್ಲಿ ಶ್ರೀ ಭುವನೇಶ್ವರೀ ದೇವಾಲಯ ಅಡಳಿತ ಮಂಡಳಿಯವರು, ತಾಲೂಕಾ ಪತ್ರಕರ್ತರ ಸಂಘದವರು ಸಹಕಾರ ನೀಡುತ್ತಿದ್ದಾರೆ.