ಭಟ್ಕಳ: ಕನ್ನಡ ರಾಜ್ಯೋತ್ಸವದ ನಿಮಿತ್ತ ಕೋಟಿ ಕಂಠ ಗಾಯನ ಕಾರ್ಯಕ್ರಮ ಶುಕ್ರವಾರದಂದು ಇಲ್ಲಿನ ಪೇಟೆ ಮುಖ್ಯ ರಸ್ತೆಯ ಜಟ್ಟಪ್ಪ ನಾಯ್ಕ ಬಸದಿಯಲ್ಲಿ ತಾಲೂಕಾಡಳಿತದ ವತಿಯಿಂದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಕೋಟಿ ಕಂಠ ಗಾಯನ ಕಾರ್ಯಕ್ರಮ ನಮ್ಮ ಸಂಸ್ಕೃತಿ, ನೆಲ ಹಾಗೂ ನಮ್ಮ ವೈವಿಧ್ಯತೆ ಹಾಗೂ ಎಲ್ಲರ ಬಗ್ಗೆ ಗಮನ ಮತ್ತು ಅರಿವು ಮೂಡಿಸುವಂತಹ ಅದ್ಭುತ ಕಾರ್ಯಕ್ರಮವಾಗಿದೆ. ಈ ನಾಡನ್ನು ಪರಿಚಯ ಮಾಡಬೇಕು, ಹೊಸ ಅಧ್ಯಾಯ ಬರೆಯಬೇಕು ಹಾಗೂ ಇಲ್ಲಿರುವ ಸಂಸ್ಕೃತಿಯನ್ನು ಯುವಪೀಳಿಗೆಗೆ ತಿಳಿಸುವುದರ ಜೊತೆಗೆ ನಮ್ಮ ಕರ್ನಾಟಕದ ಬಗ್ಗೆ ನಮ್ಮಲ್ಲಿರುವ ಗೌರವವನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದ ಸರ್ಕಾರ ಹಾಗೂ ಅನೇಕ ಸಂಘ- ಸಂಸ್ಥೆಗಳು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದ ಅವರು, ಕರ್ನಾಟಕದ ಪ್ರಸಿದ್ಧ 6 ಗೀತೆಗಳನ್ನು ಒಂದೇ ವೇಳೆಯಲ್ಲಿ ಜಿಲ್ಲೆಯ 5 ಲಕ್ಷ ಜನ ಹಾಡಿದ್ದಾರೆ. ಈಗಿನ ವಿದ್ಯಾರ್ಥಿಗಳಿಗೆ ನಮ್ಮ ನಮ್ಮ ನಾಡು- ನುಡಿಯ ಬಗ್ಗೆ ಗೌರವ ಬರುವ ದೃಷ್ಟಿಯಿಂದ ಸರ್ಕಾರ ಇಂತಹ ನೂತನ ಕಾರ್ಯಮಗಳನ್ನು ಹಮ್ಮಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ದಿ ನ್ಯೂ ಇಂಗ್ಲಿಷ್ ಸ್ಕೂಲ್ ಹಾಗೂ ವಿದ್ಯಾಭಾರತಿ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್., ತಹಶೀಲ್ದಾರ್ ಸುಮಂತ ಬಿ., ಪುರಸಭೆ ಮುಖ್ಯಾಧಿಕಾರಿ ಸುರೇಶ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಹಾಗೂ ಮುಂತಾದವರು ಇದ್ದರು.