ಮೈಸೂರು: ಕಬ್ಬಿನ ದರ ನಿಗದಿ ವಿಳಂಬ ವಿರೋಧಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ನಾಲ್ಕು ಸಭೆಗಳನ್ನು ನಡೆಸಿದರು. ಕಳೆದ ನಾಲ್ಕು ತಿಂಗಳಿಂದ ರೈತರು ಧರಣಿ ನಡೆಸುತ್ತಿದ್ದರೂ ಈ ವರೆಗೂ ಯಾವುದೇ ನಿರ್ಧಾರಗಳೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
ಸಕ್ಕರೆ ಕಾರ್ಖಾನೆ ಮಾಲೀಕರ ಲಾಬಿಗೆ ರಾಜ್ಯ ಸರಕಾರ ಮಣಿಯುತ್ತಿದೆ, ಸರಕಾರ ಪ್ರತಿ ಟನ್ ಕಬ್ಬಿಗೆ ಕನಿಷ್ಠ 3,500 ರೂ. ಬೆಲೆ ನಿಗದಿ ಮಾಡದೆ ರೈತರಿಗೆ ದ್ರೋಹ ಮಾಡುತ್ತಿದೆ, 30 ಲಕ್ಷ ಕಬ್ಬು ಬೆಳೆಗಾರರ ಬೆಂಬಲಕ್ಕೆ ಶಾಸಕರು, ಸಂಸದರು, ಸಚಿವರ ನಿಲ್ಲುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವರು ಮತ್ತು ಸಂಸದರು ಅಡಿಕೆ ಬೆಳೆಗಾರರ ನಿಯೋಗವನ್ನು ನವದೆಹಲಿಗೆ ಕೊಂಡೊಯ್ಯಬಹುದಾದರೆ, ಕಬ್ಬು ಬೆಳೆಗಾರರನ್ನೇಕೆ ನಿರ್ಲಕ್ಷಿಸುತ್ತಿದ್ದಾರೆ? ಎಂದು ಪ್ರಶ್ನಿಸಿದರು. ಅಲ್ಲದೆ, ಸರ್ಕಾರದ ಕ್ರಮದ ವಿರುದ್ಧ ಅಕ್ಟೋಬರ್ 27 ರಂದು ರೈತರು ರಸ್ತೆ ತಡೆ ನಡೆಸಿ ಅಕ್ಟೋಬರ್ 31 ರಂದು ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ.