ಹಳಿಯಾಳ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ಕುಳಿತಿರುವ ಕಬ್ಬು ಬೆಳೆಗಾರರು, ದೀಪಾವಳಿ ಹಬ್ಬವನ್ನು ಪಟ್ಟಣದ ಆಡಳಿತ ಸೌಧದ ಎದುರಿನಲ್ಲೇ ಸೋಮವಾರ ಆಚರಿಸಿದ್ದಾರೆ.
ನ್ಯಾಯಯುತ ಬೆಲೆ, ಹಿಂದಿನ ಬಾಕಿ ಹಾಗೂ ಕಟಾವು ಮತ್ತು ಸಾಗಾಟ ವೆಚ್ಚ ಪರಿಷ್ಕರಣೆ ಈ ಪ್ರಮುಖ ಮೂರು ಬೇಡಿಕೆಯನ್ನು ಮುಂದಿಟ್ಟು ಕಳೆದ 27 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿದ್ದು, ಸೋಮವಾರ ಹೋರಾಟ 28 ದಿನ ಪೂರೈಸಿದೆ. ಅದರೊಂದಿಗೆ ದೀಪಾವಳಿ ಹಬ್ಬ ಕೂಡ ಬಂದಿರುವುದರಿಂದ ಆಡಳಿತ ಸೌಧದ ಎದುರಿಗೆ ಕಬ್ಬು ಮತ್ತು ಬಾಳೆಗಿಡಗಳನ್ನು ಕಟ್ಟಿ ಪೂಜೆ ಸಲ್ಲಿಸುವ ಮೂಲಕ ಮೂರು ದಿನಗಳ ದೀಪಾವಳಿ ಹಬ್ಬವನ್ನು ಆಚರಿಸುವುದಕ್ಕೆ ಚಾಲನೆ ನೀಡಿದರು. ಮಹಿಳೆಯರು ಹೋರಾಟಗಾರರಿಗೆ ಆರತಿ ಬೆಳಗುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬಿದರು. ವಿವಿಧ ಗ್ರಾಮಗಳಿಂದ ರೈತರು ಆಗಮಿಸಿ ಭಜನಾ ಹಾಡುಗಳ ಮೂಲಕ ರಾತ್ರಿಯಿಡೀ ಜಾಗರಣೆ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರ ಹೋರಾಟಗಾರರ ಕುಟುಂಬದವರು ಇಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಬ್ಬು ಬೆಳೆಗಾರ ಸಂಘದ ಉಕ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ ಹಿರಿಯ ರೈತ ಮುಖಂಡ ಉಡಚಪ್ಪಾ ಬೋಬಾಟಿ, ಎಮ್ ವಿ ಘಾಡಿ, ನಾಗೇಂದ್ರ ಎಸ್ ಜಿವೋಜಿ, ಶಂಕರ ಕಾಜಗಾರ, ಪ್ರಮುಖರಾದ ಸಿದ್ದಯ್ಯಾ ಬೆಂಡಿಗೇರಿಮಠ, ಸಂತೋಷ ಲೊಂಡಿ, ಬಸವರಾಜ ಬೆಂಡಿಗೇರಿಮಠ, ಅಪ್ಪಾಜಿ ಶಹಪುರಕರ, ನಾರಾಯಣ ಗಾಡೆಕರ, ಮಾರುತಿ ಪವಾರ, ಶಿವಾಜಿ ಬಂಗ್ಯಾನವರ, ಸಂಜು ಬಿಷ್ಟೇಕರ ಇತರರು ಇದ್ದರು.