ನವದೆಹಲಿ: ಭಾನುವಾರ ಮೆಲ್ಬೊರ್ನ್ ಅಂಗಳದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾವನ್ನು ಸೋಲಿಸಿದ ನಂತರ, ಎರಡನೇ ಪಂದ್ಯಕ್ಕಾಗಿ ಟೀಂ ಇಂಡಿಯಾ ಸಿಡ್ನಿಗೆ ಪ್ರಯಾಣಿಸಿದೆ. ಮೊದಲನೇ ಪಂದ್ಯದಲ್ಲಿ ರೋಚಕ ಗೆಲುವಿನ ಖುಷಿಯಲ್ಲಿರುವ ಟೀಂ ಇಂಡಿಯಾ ಆಟಗಾರರು ಸಂಭ್ರಮದಿಂದಲೇ ದೀಪಾವಳಿ ಆಚರಣೆ ಮಾಡಿದ್ದಾರೆ. ವಿರಾಟ್ ಕೊಹ್ಲಿ, ದೀಪಕ್ ಹೂಡಾ, ರವೀಂದ್ರ ಜಡೇಜಾ ಮತ್ತು ಯುಜ್ವೇಂದ್ರ ಚಾಹಲ್ ಸೇರಿದಂತೆ ಹಲವಾರು ಕ್ರೀಡಾ ಸಿಬ್ಬಂದಿಗಳು ತಮ್ಮ ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ.
ಇಡೀ ದೇಶವೇ ಈಗ ಹಬ್ಬದ ಸಂಭ್ರಮದಲ್ಲಿದೆ. ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿರುವುದು ಅಭಿಮಾನಿಗಳಿಗೆ ಹಬ್ಬದ ಖುಷಿಯನ್ನು ಡಬಲ್ ಮಾಡಿದೆ. ಅತ್ಯಂತ ಮಂಗಳಕರವಾದ ಹಿಂದೂ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಭಾರತ ಕ್ರಿಕೆಟ್ ತಂಡವು ಗುರುವಾರ ಸಿಡ್ನಿಯಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ಸಿಡ್ನಿಯ ಹೋಟೆಲ್‌ನಲ್ಲಿ ಟೀಂ ಇಂಡಿಯಾ ಆಟಗಾರರು ತಂಗಿದ್ದು, ಅಲ್ಲಿಯೇ ದೀಪಾವಳಿ ಆಚರಣೆ ಮಾಡಿದ್ದಾರೆ.
ಶುಭಾಶಯ ಕೋರಿದ ವಿರಾಟ್: ಭಾನುವಾರದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹೀರೋ ಆಗಿ ಮಿಂಚಿದ ವಿರಾಟ್ ಕೊಹ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳಿ ಶುಭಾಶಯದ ಸಂದೇಶವನ್ನು ಹಂಚಿಕೊಂಡಿದ್ದಾರೆ. ‘ಈ ದೀಪಾವಳಿ ನಿಮ್ಮ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ತರಲಿ’ ಎಂದು ಸಂದೇಶ ನೀಡಿದ್ದಾರೆ.
ಟೀಂ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಹಾಲ್ ತಮ್ಮ ಪತ್ನಿ ಧನಶ್ರೀಯೊಂದಿಗೆ ದೀಪಾವಳಿ ಆಚರಣೆ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದು, ಶುಭಾಶಯ ಕೋರಿದ್ದಾರೆ. ತಂಡದ ಆಲ್ ರೌಂಡರ್ ದೀಪಕ್ ಹೂಡಾ ಕೂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ. ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.
ಬಿಸಿಸಿಐ ಕೂಡ ತನ್ನ ಅಭಿಮಾನಿಗಳಿಗೆ ಬೆಳಕಿನ ಹಬ್ಬದ ಶುಭಾಶಯ ಕೋರಿದೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರೆಟ್ ಲೀ ಕೂಡ ಭಾರತೀಯರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಶುಭಾಶಯ ಕೋರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.