ಹೊನ್ನಾವರ: ಕಾಡು ಪ್ರಾಣಿಗಳ ಹಾವಳಿಯ ಬಗ್ಗೆ ಅರಣ್ಯ ಮತ್ತು ಪೊಲೀಸ್ ಇಲಾಖೆಯು ಜಂಟಿಯಾಗಿ ಸಾರ್ವಜನಿಕರ ನೆರವಿಗೆ ಧಾವಿಸಿ ಜನರ ಆತಂಕ ದೂರ ಮಾಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಸಾಲ್ಕೋಡ್ ಗ್ರಾ.ಪಂ. ಸಭಾಭವನದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಗ್ರಾಮದಲ್ಲಿ ಕಾಡುಪ್ರಾಣಿ ಹಾವಳಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಸಮುಖದಲ್ಲಿ ಸಾರ್ವಜನಿಕರ, ಜನಪ್ರತಿನಿಧಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಸಾರ್ವಜನಿಕರು ಸಂಚರಿಸುವ ಪ್ರದೇಶದಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಮೂಲಕ ಸಾರ್ವಜನಿಕರ ಭಯ ಹೋಗಲಾಡಿಸಬೇಕು. ಗ್ರಾಮದ ಅರಣ್ಯ ಇಲಾಖೆಯ ಪ್ರದೇಶದಲ್ಲಿ ಹಿಂಡು ಬೆಳೆದಿದ್ದು, ಕೂಡಲೇ ಸ್ವಚ್ಛಗೊಳಿಸುವ ಮೂಲಕ ಕಾರ್ಯಪ್ರವೃತ್ತರಾಗಬೇಕು. ಕಾಡುಪ್ರಾಣಿ ಹಾವಳಿಯ ವಿಷಯ ಸೂಕ್ಷ್ಮವಾಗಿದ್ದರಿಂದ ಅವುಗಳ ಸಂಚಾರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದೇ, ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಎಸಿಎಫ್ ಜಗದೀಶ ಮಾತನಾಡಿ, ಈಗಾಗಲೇ ಒಂದು ಬೋನ್ ಇಡಲಾಗಿದೆ. ಸಾರ್ವಜನಿಕರ ಪರವಾಗಿ ನಮ್ಮ ಇಲಾಖೆ ಇರಲಿದೆ. ಕಾಡುಪ್ರಾಣಿಯಿಂದ ಮನುಷ್ಯರ ಮೇಲೆ ಆದ ಅವಘಡ ಹಾಗೂ ಬೆಳೆಹಾನಿಗೆ ಪರಿಹಾರವು ಸಕಾಲ ವ್ಯಾಪ್ತಿಗೆ ಬಂದಿರುವುದರಿಂದ ಶಿಘ್ರವಾಗಿ ಪರಿಹಾರ ಸಿಗಲಿದೆ ಎಂದು ಮಾಹಿತಿ ನೀಡಿದರು.
ಸಿಪಿಐ ಶ್ರೀಧರ ಎಸ್.ಆರ್. ಮಾತನಾಡಿ, ನಾಗರಿಕ ಬಂದೂಕು ತರಬೇತಿ ಶಿಬಿರ ಹೊನ್ನಾವರದಲ್ಲಿ ಮಾಡಿಸಿ 5 ದಿನ ತರಬೇತಿ ನೀಡಿ ಲೈಸೆನ್ಸ್ ಪಡೆಯಬಹುದು. ಗ್ರಾಮದಲ್ಲಿ ಇಲಾಖೆಯ ವತಿಯಿಂದ ಸಂಜೆ ಜೀಪ್ನಲ್ಲಿ ಸೈರನ್ ಅಳವಡಿಸಿಕೊಂಡು ಸಂಚರಿಸುತ್ತೇವೆ. ನಿಮ್ಮಲ್ಲಿ ಇಂತಹ ಸಮಸ್ಯೆ ಉಂಟಾದಲ್ಲಿ 112ಗೆ ಕರೆ ಮಾಡಿದರೆ ಕೂಡಲೇ ನೆರವಿಗೆ ಧಾವಿಸಲಿದೆ. ಸಾರ್ವಜನಿಕರಿಗೆ ಭಯ ಬೇಡ, ಜಾಗೃತಿ ಇರಲಿ ಎಂದರು.
ಗ್ರಾ.ಪಂ . ಅಧ್ಯಕ್ಷೆ ರಜನಿ ನಾಯ್ಕ, ಉಪಾಧ್ಯಕ್ಷ ಸಚಿನ ನಾಯ್ಕ, ಸದಸ್ಯರಾದ ಗಣಪತಿ ಭಟ್, ಲಕ್ಷ್ಮೀ ಮುಕ್ರಿ, ಪಿಎಸೈ ಮಹಾಂತೇಶ ನಾಯ್ಕ, ಆರ್ಎಫ್ಓ ವಿಕ್ರಂ ರೆಡ್ಡಿ, ಸಾಲ್ಕೋಡ್, ಕಡ್ಲೆ, ಹೊಸಾಕುಳಿ, ಮುಗ್ವಾ ಗ್ರಾಮದ ಗ್ರಾಮಸ್ಥರು ಇದ್ದರು.