ದಾಂಡೇಲಿ: ನಗರದ ರೋಟರಿ ಕ್ಲಬ್ ಆಶ್ರಯದಲ್ಲಿ ರೋಟರಿ ಶಾಲೆಯ ಸಹಕಾರದಲ್ಲಿ ರೋಟರಿ ಶಾಲೆಯಿಂದ ಪೊಲಿಯೋ ಲಸಿಕಾ ದಿನಾಚರಣೆಯ ಜಾಥಾ ಕಾರ್ಯಕ್ರಮಕ್ಕೆ ಶನಿವಾರ ಚಾಲನೆಯನ್ನು ನೀಡಲಾಯಿತು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ರೋಟರಿ ಕ್ಲಬ್ನ ಅಧ್ಯಕ್ಷ ಸುಧಾಕರ ಶೆಟ್ಟಿಯವರು ರೋಟರಿ ಕ್ಲಬ್ ಶಿಕ್ಷಣ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ವಿಶೇಷವಾಗಿ ತೊಡಗಿಸಿಕೊಳ್ಳುವುದರ ಮೂಲಕ ಸದೃಢ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ. ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿಯೂ ರೋಟರಿ ಕ್ಲಬ್ ಮುಂಚೂಣಿಯಲ್ಲಿ ನಿಂತು ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಾ ಬಂದಿದೆ. ಪೋಲಿಯೊ ನಿರ್ಮೂಲನೆಗಾಗಿ ಜಾಗತಿಕ ಮಟ್ಟದಲ್ಲಿ ರೋಟರಿ ಸಂಸ್ಥೆ ಪರಿಪೂರ್ಣತೆಯಿಂದ ಶ್ರಮಿಸುತ್ತಾ ಬಂದಿದೆ. ಆರೋಗ್ಯ ಕ್ಷೇತ್ರಕ್ಕೆ ಬಹುದಿಒಡ್ಡ ಸವಾಲಾಗಿದ್ದ ಪೋಲಿಯೊ ನಿರ್ಮೂಲನೆಗಾಗಿ ಪೋಲಿಯೊ ಲಸಿಕೆ ಅಭಿಯಾನವು ಯಶಸ್ವಿಯಾಗಿ ನಡೆದ ಫಲವಾಗಿ ಇಂದು ನಾವು ಈ ಕಾರ್ಯದಲ್ಲಿ ಯಶಸ್ಸನ್ನು ಕಾಣುವಂತಾಗಿದೆ. ಆರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರಾದಿಯಾಗಿ, ರೋಟರಿ ಕ್ಲಬ್, ಇನ್ನರ್ವ್ಹೀಲ್ ಕ್ಲಬ್ ಹೀಗೆ ಮೊದಲಾದ ಸಂಘ- ಸಂಸ್ಥೆಗಳು ಸಮರಸೇನಾನಿಯಾಗಿ ಕೆಲಸ ನಿರ್ವಹಿಸಿದ ಫಲಶೃತಿಯಾಗಿ ಪೊಲಿಯೋ ನಿರ್ಮೂಲನೆಯಾಗುತ್ತಿದೆ ಎಂದರು.
ರೋಟರಿ ಕ್ಲಬಿನ ಹಿರಿಯ ಸದಸ್ಯರಾದ ಎಚ್.ವೈ.ಮೆರ್ವಾಡಯೆವರು ಯಾವುದೇ ಕೆಲಸವನ್ನು ಬದ್ಧತೆಯಿಂದ ಮಾಡಿದಾಗ ಅಂದು ಕೊಂಡ ಗುರಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪೋಲಿಯೊ ನಿರ್ಮೂಲನೆಯ ಮಹಾಯಜ್ಞದ ಪರಿಣಾಮವಾಗಿ ಜನಮಾನಸದಲ್ಲಿ ಜಾಗೃತಿ ನಿರ್ಮಾಣವಾಗಿದೆ. ಇಂತಹ ಮಹತ್ಕರ್ಯದಲ್ಲಿ ರೋಟರಿ ಕ್ಲಬ್, ಇನ್ನರ್ ವಿಲ್ ಕ್ಲಬ್ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ತೊಡಗಿಸಿಕೊಳ್ಳುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಉಪ ಪ್ರಾಂತಪಾಲರಾದ ಎಸ್.ಪ್ರಕಾಶ ಶೆಟ್ಟಿ, ರೋಟರಿ ಕ್ಲಬಿನ ಕಾರ್ಯದರ್ಶಿ ಜೋಸೆಪ್ ಗೋನ್ಸಾಲಿಸ್, ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅರುಣ್ ನಾಯಕ, ರೋಟರಿ ಪಲ್ಸ್ ಪೊಲಿಯೋ ಚೇರ್ಮನ್ ಡಾ.ಅನೂಪ್ ಮಾಡ್ದೋಳ್ಕರ್, ರೋಟರಿ ಪ್ರಮುಖರುಗಳಾದ ಪಿ.ವಿ.ಹೆಗಡೆ, ಆರ್.ಪಿ.ನಾಯ್ಕ, ಮಿಥುನ್ ನಾಯ್ಕ, ಶೇಖರ ಪೂಜಾರಿ, ರೋಟರಿ ಶಾಲೆಯ ಮುಖ್ಯೋಪಾಧ್ಯಯರಾದ ಮೋಹನ ಪತ್ತಾರ್, ಶಿಕ್ಷಕರುಗಳಾದ ಪುಂಡಲೀಕ್ ದಾಸರ, ಮುಕಾಂಬಿಕಾ, ಭಾರತಿ, ರವಿ ಶಾನಭಾಗ್, ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು. ಜಾಥಾದಲ್ಲಿ ರೋಟರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರೋಟರಿ ಶಾಲೆಯಿಂದ ಆರಂಭಗೊಂಡಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕೊನೆಯಲ್ಲಿ ರೋಟರಿ ಶಾಲೆಯ ಆವರಣದಲ್ಲಿ ಸಂಪನ್ನಗೊಂಡಿತು .