ಕುಮಟಾ: ಜನರಿಗಾಗಿ, ಜನರಿಗೋಸ್ಕರ ಕುಮಟಾ- ಹೊನ್ನಾವರ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸದುದ್ದೇಶದಿಂದ ಮತ್ತು ಸರ್ಕಾರದ ಮೇಲೆ ಒತ್ತಡ ಹೇರಲು ಅ.30ರಂದು ಹೊನ್ನಾವರದಿಂದ ಕುಮಟಾ ವರೆಗೆ ಜನಪರ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಗೆಳೆಯರ ಬಳಗ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಕುಮಟಾ ತಾಲೂಕು ಸಂಪತ್ ಭರಿತ ನಾಡಿದು. ಕಲೆ, ಸಂಸ್ಕೃತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಷಾತೀತ, ಜಾತ್ಯಾತೀತವಾಗಿ ಈ ಜನಪರ ಯಾತ್ರೆಯನ್ನು ನಡೆಸುತ್ತಿದ್ದೇವೆ. ಅ.30ರ ಬೆಳಗ್ಗೆ 9 ಗಂಟೆಗೆ ಹೊನ್ನಾವರದ ಶರಾವತಿ ಸರ್ಕಲ್‌ನಿಂದ ಆರಂಭವಾಗುವ ಪಾದಯಾತ್ರೆಯು ಹೊನ್ನಾವರ ಪಟ್ಟಣ, ದಂಡಿನ ದುರ್ಗಾದೇವಿ ದೇವಸ್ಥಾನ , ಕರ್ಕಿ, ಹಳದಿಪುರ, ಹೊಳೆಗದ್ದೆ, ಧಾರೇಶ್ವರ, ಅಳ್ವೇಕೋಡಿ ಮೂಲಕ ಕುಮಟಾ ಗಿಬ್ ಸರ್ಕಲ್‌ನಲ್ಲಿ ಸಮಾವೇಶಗೊಳ್ಳಲಿದೆ. ಈ ಪಾದಯಾತ್ರೆ ಸಾಗುವಾಗ ಗ್ರಾಮೀಣ ಭಾಗದ ಜನರು ತಮ್ಮ ಭಾಗಗಳ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಬಹುದಾಗಿದೆ. ಪಾದಯಾತ್ರೆಯಲ್ಲಿ ಬರುವ ಮನವಿಗಳನ್ನು ಸಂಗ್ರಹಿಸಿ ಕುಮಟಾ ತಹಸೀಲ್ದಾರ್ ಮೂಲಕ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ರವಾನಿಸಲಾಗುವುದು ಎಂದರು.
ಈ ಪಾದಯಾತ್ರೆಯಲ್ಲಿ ನನ್ನ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸಾಥ್ ನೀಡುವ ಜೊತೆಗೆ ಕ್ಷೇತ್ರದ ಜನತೆ ಕೂಡ ಸಂಪೂರ್ಣ ಸಹಕಾರ ನೀಡುವ ಮೂಲಕ ಪಾದಯಾತ್ರೆಯನ್ನು ಯಶಸ್ವಿಗೊಳಿಸುತ್ತಾರೆಂಬ ವಿಶ್ವಾಸವಿದೆ. ಎಲ್ಲರೂ ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಸೋನಿ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಜಿ.ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಜಿ.ಕೆ.ಪಟಗಾರ, ಪ್ರಮುಖರಾದ ಬಲೀಂದ್ರ ಗೌಡ, ಶಂಭು ನಾಯ್ಕ, ಶಶಿ ಅಡಿಗುಳಿ, ಚಂದ್ರಶೇಖರ ಪಾವಸ್ಕರ್, ಸೂರಜ ಸೋನಿ ಗೆಳೆಯರ ಬಳಗದ ಸಂಪತಕುಮಾರ, ಅಣ್ಣಪ್ಪ ನಾಯ್ಕ, ರಾಜೇಶ, ಸತೀಶ, ಉದಯ, ಪಾಂಡು ಪಟಗಾರ, ಯಶವಂತ ಗೌಡ, ಸುದರ್ಶನ ಶಾನಭಾಗ, ವೆಂಕಟೇಶ, ಸುರೇಶ ಇತರರು ಇದ್ದರು.